ನ್ಯೂಸ್

ತಾಯಿ, ಮಗನ ಕೊಲೆ; ಮೃತಳ ಪ್ರಿಯಕರ ಸೆರೆ

ಬೆಂಗಳೂರು: ತಾಯಿ, ಮಗನ ಜೋಡಿ ಕೊಲೆ ಪ್ರಕರಣ ಸಂಬಂಧ ಮೃತಳ ಪ್ರಿಯಕರನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.

ಏರ್‌ಪೋರ್ಸ್ ಸಮೀಪದ ಕುವೆಂಪುರನಗರ ನಿವಾಸಿ ಶೇಖರ್ ಅಲಿಯಾಸ್ ಶೇಖರಪ್ಪ ಬಂಧಿತ. ಏರ್‌ಪೋರ್ಸ್‌ನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಬಾಗಲಗುಂಟೆಯ ರವೀಂದ್ರನಗರದ ನವನೀತಾ (33), ಈಕೆಯ ಪುತ್ರ ಸಾಯಿ ಸೃಜನ್ (11) ಎಂಬಾತನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ. ಖಚಿತ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ನವನೀತಾ ಮತ್ತು ಕೆ.ಎನ್. ಚಂದ್ರ ದಂಪತಿಗೆ ಸಾಯಿ ಸೃಜನ್ ಮತ್ತು ಸಾಯಿ ಅಭಿಷೇಕ್ ಮಕ್ಕಳು. ಮದುವೆಯಾದ ಮೇಲೆ ಸ್ವಲ್ಪ ದಿನಗಳ ಮೇಲೆ ದಂಪತಿ ಟಿ. ದಾಸರಹಳ್ಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು.

ಸಾಯಿ ಅಭಿಷೇಕ್‌ನನ್ನು ಆಂಧ್ರಪ್ರದೇಶದಲ್ಲಿ ಶಾಲೆಗೆ ಸೇರಿಸಿ ಹಾಸ್ಟೆಲ್‌ನಲ್ಲಿ ಇರಿಸಿದ್ದರು. ಸಾಯಿ ಸೃಜನ್, ತಂದೆ-ತಾಯಿ ಜತೆ ನೆಲೆಸಿದ್ದ. ಮದ್ಯ ವ್ಯಸನಿಯಾದ ಪತಿಯನ್ನು ಬಿಟ್ಟು ರವೀಂದ್ರನಗರದಲ್ಲಿ ಎರಡು ವರ್ಷಗಳಿಂದ ನವನೀತಾ ತನ್ನ ಪುತ್ರನೊಂದಿಗೆ ನೆಲೆಸಿದ್ದಳು. ಕಾಲ್ ಸೆಂಟರ್‌ನಲ್ಲಿ ನವನೀತಾ ಕೆಲಸ ಮಾಡುತ್ತಿದ್ದರೇ ಖಾಸಗಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ಸಾಯಿ ಸೃಜನ್ ಓದುತ್ತಿದ್ದ.

ಈ ನಡುವೆ ನವನೀತಾಗೆ ಎಲೆಕ್ಟ್ರಿಷಿಯನ್ ಶೇಖರ್ ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ಅನ್ಯೂನ್ಯವಾಗಿ ಇದ್ದರು. ಇತ್ತೀಚೆಗೆ ನವನೀತಾಗೆ ಲೋಕೇಶ್ ಎಂಬಾತ ಪರಿಚಯನಾಗಿದ್ದ. ವಿಚಾರ ತಿಳಿದ ಶೇಖರ್, ಪ್ರಶ್ನೆ ಮಾಡಿದ್ದ. ಇದರಿಂದ ಶೇಖರ್ ಮತ್ತು ನವನೀತಾ ನಡುವೆ ಜಗಳ ಶುರುವಾಗಿತ್ತು. ಮಂಗಳವಾರ ರಾತ್ರಿ ಇದೇ ವಿಚಾರಕ್ಕೆ ಜಗಳವಾಗಿದ್ದು, ನವನೀತಾ ಕತ್ತುಕೊಯ್ದು ಮತ್ತು ಸಾಯಿ ಸೃಜನ್‌ನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿ ಶೇಖರ್ ಹೊರಗಡೆಯಿಂದ ಮನೆ ಲಾಕ್ ಮಾಡಿಕೊಂಡು ಹೋಗಿದ್ದ. ಮನೆಯಿಂದ ಅಡುಗೆ ಅನಿಲ ಸೋರಿಕೆ ಆಗಿರುವುದು ಗೊತ್ತಾಗಿ ಅಕ್ಕಪಕ್ಕದ ಮನೆಯವರು ಮನೆ ಕಿಟಕಿಯಲ್ಲಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಸ್ಥಳೀಯರ ಮಾಹಿತಿ ಮತ್ತು ನವನೀತಾ ಮೊಬೈಲ್‌ನಲ್ಲಿ ಸಿಕ್ಕ ಕೆಲಸ ಸುಳಿವಿನ ಮೇರೆಗೆ ಆರೋಪಿ ಶೇಖರ್‌ನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.