ನ್ಯೂಸ್

ಮಲಗಿದ್ದಲ್ಲೇ ವೃದ್ಧ ದಂಪತಿಯನ್ನು ಉಸಿರುಗಟ್ಟಿಸಿ ಕೊಂದರು...

ಬೆಂಗಳೂರು: ಕಾಮಾಕ್ಷಿಪಾಳ್ಯದ ರಂಗನಾಥಪುರದ ಮನೆಯಲ್ಲಿ ವೃದ್ಧ ದಂಪತಿ ಮಲಗಿದ್ದಲ್ಲೇ ಕೊಲೆಯಾಗಿದ್ದು, ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ.

ಮೈಸೂರು ಮೂಲದ ನರಸಿಂಹರಾಜು(65) ಮತ್ತು ಸರಸ್ವತಿ(64) ಕೊಲೆಯಾದ ದಂಪತಿ. ಕಳೆದ 3 ವರ್ಷದಿಂದ ರಂಗನಾಥಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಓರ್ವ ಪುತ್ರನ ಜತೆ ವಾಸವಿದ್ದರು.

ಮಂಗಳವಾರ ರಾತ್ರಿ ಮಲಗಿದ್ದಾಗ ವೃದ್ಧ ದಂಪತಿಯ ಬಾಯಿಗೆ ಬಟ್ಟೆ ಇಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಇಂದು(ಬುಧವಾರ) ಬೆಳಗ್ಗೆ ಮನೆಗೆಲಸದಾಕೆ ಬಾಗಿಲು ಬಡಿದಾಗ ತೆರೆದಿಲ್ಲ. ಬಳಿಕ 'ನಮ್ಮ 100'ಗೆ ಕರೆ ಮಾಡಿ ದೂರು ನೀಡಿದ್ದರು. ಕೆಲವೇ ನಿಮಿಷಗಳಲ್ಲಿ ಬಾಗಿಲು ಒಡೆದು ಒಳಹೋಗಿ ನೋಡಿದಾಗ ಕೊಲೆಯಾದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ಮೃತರ ಪುತ್ರ ಸಂತೋಷ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆತನ ಮೇಲೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೋತ್ ತಿಳಿಸಿದ್ದಾರೆ. ಕೌಟುಂಬಿಕ ಕಲಹದ ವಿಚಾರವಾಗಿ 2 ದಿನಗಳ ಹಿಂದೆ ಮನೆಯಲ್ಲಿ ಮಗನ ಜತೆ ವೃದ್ಧ ದಂಪತಿಗೆ ಜಗಳವಾಗಿತ್ತು ಎನ್ನಲಾಗಿದೆ. ಶ್ವಾನದಳ, ಎಫ್ಎಸ್ಎಲ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದೆ.