ನ್ಯೂಸ್

ಮದ್ಯದ ಅಮಲಿನಲ್ಲಿ ಸ್ನೇಹಿತನ ಕೊಲೆ

ಬೆಂಗಳೂರು: ದಸರ ರಜೆ ಹಿನ್ನೆಲೆಯಲ್ಲಿ ಬಾರ್‌ನಲ್ಲಿ ಮದ್ಯ ಸೇವನೆಗೆ ಹೋಗಿದ್ದ ಇಬ್ಬರು ಸ್ನೇಹಿತರ ನಡುವೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಕಸ್ತೂರಿನಗರ ನಿವಾಸಿ ಯೋಗೇಂದ್ರ ಸಿಂಗ್ (25) ಕೊಲೆಯಾದ ಯುವಕ. ಕೃತ್ಯ ಎಸಗಿದ ಈತನ ಸ್ನೇಹಿತ ಉಮೇಶ್ ಎಂಬಾತನ್ನು ಬಂಧಿಸಲಾಗಿದೆ. ಮೈಸೂರು ರಸ್ತೆ ಹೊಸಗುಡ್ಡದಹಳ್ಳಿಯ ಕಲಾ ವೈಲ್ಸ್‌ನಲ್ಲಿ ಭಾನುವಾರ ತಡರಾತ್ರಿ 12.15ರಲ್ಲಿ ಘಟನೆ ನಡೆದಿದೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.

ಪಾಲಕರೊಂದಿಗೆ ನೆಲೆಸಿದ್ದ ಯೋಗೇಂದ್ರ ಸಿಂಗ್, ಎಸ್ಸೆಎಸ್ಸೆಲ್ಸಿ ಓದಿದ್ದ. 20 ದಿನಗಳ ಹಿಂದೆಯಷ್ಟೇ ಕೋಲಾರ ಜಿಲ್ಲೆ ನರಸಾಪುರದ ಸ್‌ಟಾವೇರ್ ಕಂಪನಿಯಲ್ಲಿ ಬಸ್ ಚಾಲಕನಾಗಿ ಕೆಲಸಕ್ಕೆ ಸೇರಿದ್ದ. ಕಂಪನಿಯಲ್ಲಿ ಮಲಗುತ್ತಿದ್ದ. ದಸರಾ ರಜೆ ಹಿನ್ನೆಲೆಯಲ್ಲಿ ಅಕ್ಟೋಬರ್ 12ರಂದು ಮನೆಗೆ ಬಂದಿದ್ದ ಯೋಗೇಂದ್ರ ಸಿಂಗ್, ಸೋಮವಾರ ಕೆಲಸಕ್ಕೆ ಹೋಗಬೇಕಿತ್ತು. ಈ ಸಲುವಾಗಿ ಭಾನುವಾರ ರಾತ್ರಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟ್ಟಿದ್ದ. ಆದರೆ, ಮನೆಯಿಂದ ಮೈಸೂರು ರಸ್ತೆ ಹೊಸಗುಡ್ಡದಹಳ್ಳಿಯ ಕಲಾ ವೈನ್ಸ್‌ಗೆ ಸ್ನೇಹಿತ ಉಮೇಶ್ ಜತೆಗೆ ಬಂದಿದ್ದಾನೆ.

ಅದೇ ವೇಳೆಗೆ ಪಾಲಕರು  ವಿಚಾರಿಸಿದಾಗ ಟಿಂಬರ್ ಲೇಔಟ್‌ನಲ್ಲಿ ಬಸ್ ಇದ್ದು, ಅದರಲ್ಲಿಯೇ ರಾತ್ರಿ ಮಲಗಿ ಬೆಳಗ್ಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದ್ದ. ಇತ್ತ ಸ್ನೇಹಿತನೊಂದಿಗೆ ಬಾರ್‌ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದಾಗ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ವಿಕೋಪಕ್ಕೆ ತಿರುಗಿ ಉಮೇಶ್, ಬಿಯರ್ ಬಾಟಲಿಯನ್ನು ಯೋಗೇಂದ್ರ ಸಿಂಗ್ ತಲೆಗೆ ಹೊಡೆದಿದ್ದಾನೆ. ನಂತರ ಅದೇ ಬಾಟಲಿಯನ್ನು ಯೋಗೇಂದ್ರ ಸಿಂಗ್‌ನ ಕತ್ತು, ಬೆನ್ನಿನ ಭಾಗಕ್ಕೆ ಮೂರ್ನಾಲ್ಕು ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಉಮೇಶ್, ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈ ಕುರಿತು ಯೋಗೇಂದ್ರ ಸಿಂಗ್ ತಂದೆ ಕೊಟ್ಟ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡ ಬ್ಯಾಟರಾಯನಪುರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.