ನ್ಯೂಸ್

ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಭಾವನನ್ನೇ ಕೊಂದ ಭಾಮೈದ

ಸೋಮನಾಥ ರೆಡ್ಡಿ

ಅಕ್ಕಿಆಲೂರ: ಸಿಟ್ಟಿನ ಕೈಗೆ ಬುದ್ಧಿಕೊಟ್ಟ ಭಾಮೈದುನ ತನ್ನ ಭಾವನನ್ನೇ ಕೊಲೆ ಮಾಡಿದ ಘಟನೆ ಸಮೀಪದ ಆಡೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೈಲಾರಪ್ಪ ರಾಮಣ್ಣ ಬಾರ್ಕಿ (42)ಹತ್ಯೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ, ಭಾಮೈದ ರಮೇಶ ಶೇಖಪ್ಪ ಹುಲ್ಲಮನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೂಲತಃ ಹಾನಗಲ್ಲ ನಿವಾಸಿಯಾಗಿದ್ದ ರಮೇಶ ಆಡೂರಿನ ತನ್ನ ಅಕ್ಕನ ಮನೆಯಲ್ಲಿ ವಾಸವಿದ್ದ. ಮೈಲಾರಪ್ಪ ಹಾಗೂ ಆತನ ಪತ್ನಿ ಮಧ್ಯೆ ಆಗಾಗ ಕಲಹ ನಡೆಯುತ್ತಿತ್ತು. ಮೈಲಾರಪ್ಪ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದೇ ಕಾರಣಕ್ಕೆ ರಮೇಶ ಮತ್ತು ಮೈಲಾರಪ್ಪನ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿತ್ತು. ಸಿಟ್ಟಿನ ಭರದಲ್ಲಿ ರಮೇಶ ತನ್ನ ಭಾವನಿಗೆ ದೀಪದ ಸಮೆಯಿಂದ ಹೊಡೆದಿದ್ದರಿಂದ ಮೈಲಾರಪ್ಪ ಅಸುನೀಗಿದ್ದಾನೆ.

ಘಟನಾಸ್ಥಳಕ್ಕೆ ಎಸ್ಪಿ ಡಾ. ಶಿವಕುಮಾರ, ಡಿವೈಎಸ್ಪಿ ಮಂಜುನಾಥ ಹಿರೇಮಠ, ಸಿಪಿಐ ಶ್ರೀಧರ ಎಸ್.ಆರ್, ಪಿಎಸ್‌ಐ ಸಂಪತ್ ಆನಿಕಿವಿ ಮತ್ತು ಕರಬಸಪ್ಪ ಕರಡೆಪ್ಪನವರ, ಸತೀಶ ಹಳಕೊಪ್ಪದ ಭೇಟಿ ನೀಡಿ ಪರಿಶೀಲಿಸಿದರು. ಆಡೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.