ನ್ಯೂಸ್

ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷರಿಗಿಲ್ಲ ಆಹ್ವಾನ

Vijayanagara - Veerendra

ಜಿಲ್ಲಾಡಳಿತದ ಕ್ರಮಕ್ಕೆ ನಗರಸಭೆ ಸದಸ್ಯರ ಅಸಮಾಧಾನ

ಹೊಸಪೇಟೆ: ಹೊಸಪೇಟೆಯಲ್ಲಿ ನವೆಂಬರ್ ೨ ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಕಾರ್ಯಕ್ರ ಮಕ್ಕೆ ನಗರಸಭೆ ಅಧ್ಯಕ್ಷರನ್ನು ಕಡೆಗಣಿಸಿದ್ದಾರೆ ಎಂದು ನಗರಸಭೆ ಸದಸ್ಯರು ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದ ಸಮೀಪದಲ್ಲಿ ನಿರ್ಮಿಸಿರುವ ನೂತನ ಜಿಲ್ಲಾ ಗ್ರಂಥಾಲಯ ಮುಂಭಾಗದಲ್ಲಿ ಜಮಾಯಿಸಿದ ನಗರಸಭೆ ಸದಸ್ಯರು, ಜಿಲ್ಲಾಡಳಿತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.

ಈ ವೇಳೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ ಕುಮಾರ್ ಹಾಗೂ ಸದಸ್ಯ ಎಲ್.ಎಸ್.ಆನಂದ ಮಾತನಾಡಿ, ಜಿಲ್ಲಾಡಳಿತದಿಂದ ಇತ್ತೀಚೆಗೆ ನಗರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿಲ್ಲ. ನಗರಸಭೆ ಅಧ್ಯಕ್ಷರು ನಗರದ ಪ್ರಥಮ ಪೌರರಾಗಿದ್ದರೂ, ಅವರಿಗೆ ಸೂಕ್ತ ಮನ್ನಣೆ ನೀಡುತ್ತಿಲ್ಲ. ಜಿಲ್ಲಾಡಳಿತದಿಂದ ನಗರಸಭೆ ವ್ಯಾಪ್ತಿಯಲ್ಲಿ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಂಡರೂ, ಆಹ್ವಾನ ಪತ್ರಿಕೆಯಲ್ಲೂ ಹೆಸರು ಮುದ್ರಿಸುತ್ತಿಲ್ಲ. ಅವರಿಗೆ ನೀಡಬೇಕಾದ ಸ್ಥಾನಮಾನ ನೀಡುತ್ತಿಲ್ಲ. ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ದಲಿತ ಹಾಗೂ ಹಿಂದುಳಿದ ವರ್ಗದವರು ಎಂಬ ಕಾರಣಕ್ಕೆ ಈ ರೀತಿ ನಡೆದುಕೊಳ್ಳುತ್ತಿದ್ದಾರೆಯೇ ಗೊತ್ತಿಲ್ಲ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ಗುರುವಾರ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ನಗರಸಭೆಯ ಎಲ್ಲ ಸದಸ್ಯರು ಪಕ್ಷಾತೀತವಾಗಿ ಧರಣಿ ನಡೆಸುವುದಾಗಿ ಎಚ್ಚರಿಸಿದರು.
ಹೊಸಪೇಟೆಯಲ್ಲಿ ಏರ್ಪಡಿಸಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷರು, ಸದಸ್ಯರನ್ನು ಆಹ್ವಾನಿಸದಿರುವುದಕ್ಕೆ ನಗರದ ಜಿಲ್ಲಾ ಗ್ರಂಥಾಲಯದ ಎದುರು ಬುಧವಾರ ಜಮಾಯಿಸಿದ್ದ ನಗರಸಭೆ ಸದಸ್ಯರಾದ ತಾರಿಹಳ್ಳಿ ಜಂಬುನಾಥ, ಎಚ್.ಕೆ.ಮಂಜುನಾಥ, ಹುಲಗಪ್ಪ ವಡ್ರು, ಎಚ್.ರಾಘವೇಂದ್ರ, ಶೇಕ್ಷಾವಲಿ, ಕೆ.ಗೌಸ್ ಇದ್ದರು.