ರಾಣೆಬೆನ್ನೂರ: ನಗರದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬೆರೆಸದೆ ನಿಜವಾದ ಪ್ರಜಾಪ್ರಭುತ್ವದಡಿ ಆಡಳಿತ ನಡೆಸಿಕೊಂಡು ಬಂದಿರುವೆ ಎಂದು ನಗರಸಭೆ ಅಧ್ಯಕ್ಷೆ ಚಂಪಕ್ಕ ಬಿಸಲಹಳ್ಳಿ ಹೇಳಿದರು.
ಸ್ಥಳಿಯ ನಗರಸಭೆ ಕಚೇರಿ ಆವರಣದಲ್ಲಿ ನಗರಸಭೆಯ ಎಸ್ಎಫ್ಸಿ ಮತ್ತು ನಗರಸಭೆ ಅನುದಾನದಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಲಭಿಸಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ವಿದ್ಯೆಯಿದ್ದರೆ ಸಾಲದು ಅದರೊಂದಿಗೆ ಕೌಶಲ್ಯ ಜ್ಞಾನ ಹೊಂದಿದ್ದರೆ ಉತ್ತಮ ಉದ್ಯೋಗಾವಕಾಶಗಳು ಲಭಿಸುತ್ತವೆ. ಆದ್ದರಿಂದ ವಿದ್ಯಾಥಿರ್ಗಳು ವಿದ್ಯೆಯೊಂದಿಗೆ ಕೌಶಲ್ಯದಲ್ಲಿ ನೈಪುಣ್ಯತೆ ಸಾಧಿಸಲು ಒತ್ತು ನೀಡಬೇಕು ಎಂದರು.
ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಪ್ಪ ಕರಡೆಣ್ಣನವರ, ಸದಸ್ಯರಾದ ಮಲ್ಲಿಕಾರ್ಜುನ ಅಂಗಡಿ, ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ ಮಾತನಾಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ನಗರಸಭೆ ಸದಸ್ಯರುಗಳಾದ ಗಂಗಮ್ಮ ಹಾವನೂರ, ಜಯಶ್ರೀ ಪಿಸೆ, ನೂರುಲ್ಲಾ ಖಾಜಿ, ಶೇಖಪ್ಪ ಹೊಸಗೌಡರ, ಮಂಜುಳಾ ಹತ್ತಿ, ಆಯುಕ್ತ ಎಫ್.ಐ. ಇಂಗಳಗಿ ಮತ್ತಿತರರು ಉಪಸ್ಥಿತರಿದ್ದರು.