oplus_0 
ನ್ಯೂಸ್

ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ, ವಿರೋಧ ಪಕ್ಷದ ಸದಸ್ಯರ ಜಟಾಪಟಿ

ರಾಣೆಬೆನ್ನೂರ: ಕಳೆದ ಬಾರಿ ಸಭೆಯಲ್ಲಿ ಕೆಲ ವಿಷಯಗಳನ್ನು ಸರ್ವಾನುಮತದಿಂದ ಠರಾವು ಪಾಸು ಮಾಡಿರುವ ವಿಷಯಕ್ಕೆ ಸಂಬಂಧಿಸಿ ಇಲ್ಲಿಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಭರ್ಜರಿ ಮಾತಿನ ವಾಗ್ವಾದ ನಡೆಯಿತು.

ನಗರಸಭೆಯ ಸರ್​.ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯ ಆರಂಭದಲ್ಲಿ 1ನೇ ವಿಷಯವಾದ ಹಿಂದಿನ ಸಾಧಾರಣ ಸಾಮಾನ್ಯ ಸಭೆಯ ನಡವಳಿಕೆಗಳನ್ನು ಓದಿ ಸ್ವೀಕರಿಸುವ ವಿಚಾರ ತೆಗೆದು ಅನುಮೋದನೆ ಪಡೆಯಲು ಆಡಳಿತ ಪಕ್ಷದ ಸದಸ್ಯರು ಮುಂದಾದಾಗ, ಇದಕ್ಕೆ ವಿರೋಧ ಪಕ್ಷದ ಸದಸ್ಯ ಪ್ರಕಾಶ ಬುರಡಿಕಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.

ಕಳೆದ ಬಾರಿ ಸಭೆಯನ್ನು ಕೇವಲ 15 ನಿಮಿಷದಲ್ಲಿ ಮಾಡಿದ್ದೀರಿ. ಇದರಲ್ಲಿ ಕೆಲ ವಿಷಯಗಳಿಗೆ ನಾವು ಉಪ ಸೂಚನೆ ಕೊಟ್ಟಿದ್ದೇವೆ. ಆದರೂ ನೀವು ಸರ್ವಾನುಮತದಿಂದ ಎಲ್ಲ ವಿಷಯ ಠರಾವು ಪಾಸು ಮಾಡಿದ್ದೀರಿ. ಆ ಎಲ್ಲ ವಿಷಯಗಳನ್ನು ಕೇವಲ 15 ನಿಮಿಷದಲ್ಲಿ ನೀವು ಓದಿ ತೋರಿಸಿದರೆ ನಾನು ಇಲ್ಲೇ ರಾಜೀನಾಮೆ ಕೊಟ್ಟು ಹೋಗುವೆ ಎಂದು ಸವಾಲು ಹಾಕಿದರು. ಅಲ್ಲದೆ ಈ ವಿಷಯಕ್ಕೆ ಸಂಬಂಧಿಸಿ ಉಪ ಸೂಚನೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಡಳಿತ ಪಕ್ಷದ ಸದಸ್ಯ ಪುಟ್ಟಪ್ಪ ಮರಿಯಮ್ಮನವರ, ನಾವು ಎಲ್ಲ ವಾರ್ಡ್​ಗಳ ಅಭಿವೃದ್ಧಿ ಹಿತದೃಷ್ಟಿಯಿಂದ ಕಾಮಗಾರಿ ಹಾಕಿದ್ದೇವೆ. ಇದಕ್ಕೆ ಸಹಕಾರ ನೀಡಬೇಕು ಎಂದರು. ಆಗ ಪ್ರಕಾಶ ಬುರಡಿಕಟ್ಟಿ, ಎಲ್ಲ ವಿಷಯಕ್ಕೂ ಸಹಕಾರ, ಸಹಿ ಮಾಡಲು ಆಗಲ್ಲ ಎಂದು ಪಟ್ಟುಹಿಡಿದರು. ಹೀಗಾಗಿ ಸಭೆಯಲ್ಲಿ ಕೆಲಕಾಲ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ವಾಗ್ವಾದ ನಡೆಯಿತು.

ಮಧ್ಯ ಪ್ರವೇಶಿಸಿದ ಅಧ್ಯೆ ಚಂಪಕ್ಕ ಬಿಸಲಹಳ್ಳಿ, ವಿರೋಧ ಪಕ್ಷದವರು ನೀಡಿದ ಉಪ ಸೂಚನೆಯನ್ನು ಮತಕ್ಕೆ ಹಾಕಿದರು. ಆಗ ಉಪ ಸೂಚನೆ ಪರವಾಗಿ 9 ಮತಗಳು ಹಾಗೂ ವಿರೋಧವಾಗಿ 18 ಮತಗಳು ಬಂದವು. ಅದರಂತೆ ಅಧ್ಯಕ್ಷರು ವಿಷಯ ಪಾಸು ಮಾಡಿದರು.