ಶಿವಮೊಗ್ಗ: ರಾಜ್ಯದ 13 ಮಹಾನಗರಪಾಲಿಕೆ ನೌಕರರ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗದ ಕಾರಣ ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಮುಷ್ಕರ ಬುಧವಾರವೂ ಮುಂದುವರಿಯಿತು.
ಸರ್ಕಾರ ಬೇಡಿಕೆಗಳನ್ನು ಈಡೇರಿಸದ ಹೊರತು ಮುಷ್ಕರ ಹಿಂಪಡೆಯದಿರಲು ರಾಜ್ಯ ಮಹಾನಗರ ಪಾಲಿಕೆಗಳ ನೌಕರರ ಪರಿಷತ್ ನಿರ್ಧರಿಸಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಆದರೆ ನೌಕರರ ಬದುಕಿನ ಪ್ರಶ್ನೆಯೂ ಇರುವುದರಿಂದ ಸಾರ್ವಜನಿಕರು ಬೆಂಬಲಿಸಬೇಕು. ನೌಕರರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ್ ಒತ್ತಾಯಿಸಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಬೆಂಬಲ ಸೂಚಿಸಿ ಭಾಗವಹಿಸಿದ್ದರು. ಮೋಹನ್, ಪಿ.ಕುಮಾರ್, ಮಂಜಣ್ಣ, ವಸಂತಕುಮಾರ್, ವೇಣುಗೋಪಾಲ್, ಮಾರುತಿ, ಪೆಂಚಾಲಯ್ಯ ಮತ್ತಿತರರಿದ್ದರು.