ಮುಂಡ್ಕೂರು ಬೆಳ್ಮಣ್ ಸಾಗುವ ಹೆದ್ದಾರಿಯಲ್ಲಿ ಹೊಂಡಗಳು ನಿರ್ಮಾಣವಾಗಿರುವುದು. 
ನ್ಯೂಸ್

ಹೊಸ ರಸ್ತೆಯಲ್ಲೂ ಹೊಂಡ-ಗುಂಡಿ!

ಹರಿಪ್ರಸಾದ್ ನಂದಳಿಕೆ ಕಾರ್ಕಳ

ಇತ್ತೀಚೆಗೆ ಹೊಸದಾಗಿ ನಿರ್ಮಾಣವಾದ ಮುಂಡ್ಕೂರು ರಾಜ್ಯ ಹೆದ್ದಾರಿಯು ಈ ಬಾರಿಯ ಮೊದಲ ಮಳೆಗೆ ಅಲ್ಲಲ್ಲಿ ಹೊಂಡ- ಗುಂಡಿಗಳು ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

ಸಂಕಲಕರಿಯದಿಂದ ಬೆಳ್ಮಣ್‌ವರೆಗೆ ರಾಜ್ಯ ಹೆದ್ದಾರಿಯ ಕಾಮಗಾರಿ ಅಲಲ್ಲಿ ನಡೆದಿದ್ದು, ಮುಂಡ್ಕೂರು ಭಾಗದಲ್ಲಿ ಹಳೆಯ ರಸ್ತೆಯನ್ನು ಸಂಪೂರ್ಣ ಅಗೆದು ಹೊಸ ರಸ್ತೆ ನಿರ್ಮಿಸಲಾಗಿತ್ತು. ಆದರೆ, ರಸ್ತೆ ನಿರ್ಮಾಣಗೊಂಡ ಒಂದೇ ತಿಂಗಳಲ್ಲಿ ಹೊಂಡ ನಿರ್ಮಾಣವಾಗಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸವಾರರ ಪರದಾಟ

ಮುಂಡ್ಕೂರಿನ ಗರಡಿ ಬಳಿಯ ತಿರುವಿನಲ್ಲಿ ಬೃಹತ್ ಹೊಂಡಗಳು ನಿರ್ಮಾಣವಾಗಿವೆ. ಮುಂಡ್ಕೂರು ಪಡಿತ್ತಾರು, ಹೈಸ್ಕೂಲ್ ಬಳಿಯಲ್ಲಿ ಹಾಗೂ ಜೈನ ಪೇಟೆಯ ಬಳಿಯ ರಸ್ತೆಯೂ ತೀರ ಹದಗೆಟ್ಟು ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರು ನಿತ್ಯ ತೊಂದರೆಗೆ ಸಿಲಿಕುತ್ತಿದ್ದಾರೆ. ರಸ್ತೆ ನಿರ್ಮಾಣಗೊಂಡು ಒಂದೇ ತಿಂಗಳಲ್ಲಿ ಮೊದಲ ಮಳೆಗೆ ಡಾಂಬರು ಕಿತ್ತು ಹೋಗಿ ಹೊಂಡ ನಿರ್ಮಾಣವಾಗಿದೆ. ಇದು ಕಳಪೆ ಕಾಮಗಾರಿಯಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಹೊಂಡ ಮುಚ್ಚಿದ ಗ್ರಾಮಸ್ಥರು

ಮೊದಲ ಮಳೆಗೆ ಡಾಂಬರು, ಜಲ್ಲಿ ಎಲ್ಲವೂ ಎದ್ದು ಹೊಂಡ ನಿರ್ಮಾಣವಾಗಿ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸ್ಥಳೀಯ ಯುವಕರು ಸೇರಿಕೊಂಡು ಕಲ್ಲು-ಮಣ್ಣು ಹಾಕಿ ಹೊಂಡ ಮುಚ್ಚುವ ಕೆಲಸ ಮಾಡಿದ್ದರು. ಆದರೆ, ಕಳೆದ ಒಂದು ವಾರದಿಂದ ನಿರಂತರ ಸುರಿದ ಮಳೆಗೆ ಮತ್ತೆ ಕಲ್ಲು-ಮಣ್ಣು ಎಲ್ಲವೂ ಹೊರಬಂದು ಮತ್ತೆ ದೊಡ್ಡ ಗಾತ್ರದ ಹೊಂಡಗಳ ದರ್ಶನವಾಗುತ್ತಿದೆ.

ಪ್ರಮುಖ ಹೆದ್ದಾರಿ

ಬೆಳ್ಮಣ್‌ನಿಂದ ಮುಂಡ್ಕೂರು ಭಾಗದಲ್ಲಿ ಹಾದುಹೋಗುವ ಈ ರಾಜ್ಯ ಹೆದ್ದಾರಿ ಅತ್ಯಂತ ಪ್ರಮುಖ ರಸ್ತೆಯಾಗಿದೆ. ಉಡುಪಿ, ಮಣಿಪಾಲ, ಶಿರ್ವ, ಕಟಪಾಡಿ ಹಾಗೂ ಕಾರ್ಕಳ ಭಾಗದ ಜನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸಲು ಇದೇ ರಸ್ತೆಯನ್ನು ಅವಲಂಬಿಸಿದ್ದು, ಅಲ್ಲಲ್ಲಿ ಹದಗೆಟ್ಟ ರಸ್ತೆಯಿಂದ ದೂರದ ಊರುಗಳಿಂದ ಬರುವ ವಾಹನ ಸವಾರರು ಹೊಂಡದ ಅರಿವು ಇಲ್ಲದೆ ನಿತ್ಯ ಎಡವಟ್ಟು ಮಾಡಿಕೊಳ್ಳುವಂತಾಗಿದೆ. ಮಂಗಳೂರಿನ ವಿಮಾನ ನಿಲ್ದಾಣ ಸೇರಿದಂತೆ ಧಾರ್ಮಿಕ ಕ್ಷೇತ್ರವಾದ ಕಟೀಲು, ಪೊಳಲಿಗೆ ತೆರಳುವ ಭಕ್ತರು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯ ಪ್ರವಾಸಿಗರು ಇದೇ ರಸ್ತೆಯಲ್ಲಿ ಸಾಗುತ್ತಾರೆ. ಅವರೆಲ್ಲರಿಗೆ ಈಗ ರಸ್ತೆಯ ಗುಂಡಿ ಕಾಡತೊಡಗಿದೆ.

ರಸ್ತೆ ಕಾಮಗಾರಿ ಮುಗಿದು ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೊಂಡಗಳು ಬಿದ್ದಿವೆ. ಈಗಾಗಲೇ ಕೆಲವು ಬಾರಿ ಮಣ್ಣು ಹಾಕಿ ಹೊಂಡ ಮುಚ್ಚುವ ಕೆಲಸ ಮಾಡಿದ್ದೇವೆ. ಆದರೆ, ಮಳೆಗಾಲದಲ್ಲಿ ಇದೀಗ ಮತ್ತೆ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿವೆ.-ನಿಶಾಂತ್, ಗ್ರಾಮಸ್ಥ ರಸ್ತೆಯು ಹೊಸದಾಗಿ ಡಾಂಬರುಗೊಂಡಾಗ ಪ್ರಯಾಣಿಕರು, ಗ್ರಾಮಸ್ಥರು ಹರ್ಷಗೊಂಡಿದ್ದರು. ಆದರೆ, ಒಂದೇ ತಿಂಗಳಲ್ಲಿ ರಸ್ತೆಗೆ ಹಾಕಿದ ಡಾಂಬರಿನ ನಿಜ ಬಣ್ಣ ಬಯಲಾಗಿದೆ. ಹೊಂಡಗಳು ಬಿದ್ದು ವಾಹನ ಸಂಚಾರಕ್ಕೆ ಕಷ್ಟವಾಗಿದೆ.-ನಿತೇಶ್ ಕುಮಾರ್, ವಾಹನ ಸವಾರ ಒಂದು ಲೇಯರ್ ಡಾಂಬರು ಮಾತ್ರ ಇಲ್ಲಿ ಹಾಕಲಾಗಿದೆ. ಮಳೆ ಮುಗಿದ ಕೂಡಲೇ ಇನ್ನೊಂದು ಲೇಯರ್ ಡಾಂಬರು ಹಾಕಲಾಗುತ್ತದೆ. ಮಳೆ ಕಡಿಮೆಯಾದ ತಕ್ಷಣ ಹೊಂಡ ಮುಚ್ಚುವ ಕೆಲಸ ಮಾಡಲಾಗುತ್ತದೆ.-ಮಿಥುನ್ ಇಂಜಿನಿಯರ್, ಲೋಕೋಪಯೋಗಿ ಇಲಾಖೆ https://www.vijayavani.net/agriculture-equipment-manufactured-in-ganadakottige https://www.vijayavani.net/vehicle-riders-trouble-in-varahi-work