ನ್ಯೂಸ್

ಚಲಿಸುವ ರೈಲಿನಡಿ ಬಿದ್ದ ಮಹಿಳೆ ಬದುಕಿದ್ದೇ ಪವಾಡ..ಆದರೆ ಮುಂದೆ ಆಗಿದ್ದೇ ಬೇರೆ?

ಮುಂಬೈ: ಆಯಸ್ಸು ಗಟ್ಟಿಯಿದ್ದರೆ ಸಾವಿನ ದವಡೆಯಿಂದ ಪಾರಾಗಬಹುದು ಎಂದು ಕೆಲವರು ಹೇಳುತ್ತಿರುತ್ತಾರೆ. ಅದೇ ರೀತಿ ಕೆಲವರು ಸಾವಿನ ಅಂಚಿಗೆ ಹೋಗಿ ಬದುಕುತ್ತಾರೆ. ಇತ್ತೀಚೆಗೆ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು ರೈಲಿನಡಿ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ದುರದೃಷ್ಟವಶಾತ್ ಆಕೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಳ್ಳಬೇಕಾಯಿತು. ಈ ಘಟನೆ ಮುಂಬೈನಲ್ಲಿ ನಡೆದಿದೆ.

ಮಹಿಳೆಯೊಬ್ಬರು ಸೋಮವಾರ(ಜು.8) ಮುಂಬೈನ ಬೇಲಾಪುರ ನಿಲ್ದಾಣದಿಂದ ಥಾಣೆಗೆ ಲೋಕಲ್ ರೈಲು ಹತ್ತಲು ಯತ್ನಿಸಿದ್ದರು. ಆದರೆ, ರೈಲಿನಲ್ಲಿ ಜನಸಂದಣಿ ಇದ್ದ ಕಾರಣ, ಹತ್ತುವ ವೇಳೆ ಕಾಲು ಜಾರಿ ರೈಲಿನ ಕೆಳಗೆ ಬಿದ್ದಿದ್ದಾಳೆ. ಒಂದು ಕಂಪಾರ್ಟ್‌ಮೆಂಟ್ ಆಕೆಯ ಮೇಲೆ ಹರಿದು ಹೋಗಿದೆ. ಆಗ ಪ್ಲಾಟ್‌ಫಾರ್ಮ್‌ನಲ್ಲಿದ್ದ ಭದ್ರತಾ ಸಿಬ್ಬಂದಿ ಅಲಾರಾಂ ಮೊಳಗಿಸಿದ್ದಾರೆ. ಕೂಡಲೇ ರೈಲು ನಿಂತಿದೆ.

ಕೂಡಲೇ ರೈಲು ಸಿಬ್ಬಂದಿ ಹಳಿಗಳ ಮೇಲೆ ಇಳಿದು ಆಕೆಯನ್ನು ಮೇಲಕ್ಕೆ ಕರೆತಂದಿದ್ದಾರೆ. ಆದರೆ ಈ ಘಟನೆಯಲ್ಲಿ ಮಹಿಳೆ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಭಾನುವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ಮುಂಬೈನ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಸ್ಥಳೀಯ ರೈಲುಗಳ ಸಂಚಾರಕ್ಕೂ ವ್ಯತ್ಯಯ ಉಂಟಾಗಿದೆ. ಇದರಿಂದಾಗಿ ಕೆಲವು ರೈಲುಗಳು ಬೇರೆ ಮಾರ್ಗದಲ್ಲಿ ಚಲಿಸಿವೆ. ಕೆಲವೇ ರೈಲುಗಳು ಓಡುತ್ತಿರುವುದರಿಂದ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಫುಟ್‌ಬೋರ್ಡ್‌ನಲ್ಲೂ ನಿಲ್ಲುವಷ್ಟು ಸ್ಥಳವಿಲ್ಲ, ಇಂತಹ ಪರಿಸ್ಥಿತಿಯ ನಡುವೆ ಬೇಲಾಪುರ ನಿಲ್ದಾಣಕ್ಕೆ ಬಹಳ ಹೊತ್ತಿನ ನಂತರ ರೈಲು ಬಂದಿದೆ. ಜನರೆಲ್ಲ ರೈಲಿಗೆ ಇರುವೆಗಳಂತೆ ಮುತ್ತಿಕೊಂಡಿದ್ದಾರೆ. ಈ ವೇಳೆ ಮಹಿಳೆ ಕಾಲು ಜಾರಿ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.