ಮುಂಬೈ: ಕರ್ತವ್ಯನಿರತ ಸಂಚಾರಿ ಪೊಲೀಸ್ ಮೇಲೆ ಹಲ್ಲೆ ಮಾಡಿದ ಮಹಿಳೆಯನ್ನು ಬಂಧಿಸಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಲ್ಟಿ ಮಾರ್ಗ್ ಠಾಣಾ ಪೊಲೀಸರು ಶುಕ್ರವಾರ 29 ವರ್ಷದ ಸಂಗರಿಕಾ ತಿವಾರಿ ಎಂಬಾಕೆಯನ್ನು ಬಂಧಿಸಿದ್ದಾರೆ. ಕಾಲ್ಬದೇವಿಯಲ್ಲಿರುವ ಸುರ್ತಿ ಹೋಟೆಲ್ ಬಳಿ ಕರ್ತವ್ಯದಲ್ಲಿದ ಸಂಚಾರಿ ಕಾನ್ಸ್ಟೇಬಲ್ ಏಕನಾಥ್ ಪಾರ್ತೆ ಎಂಬುವರ ಮೇಲೆ ಹಲ್ಲೆ ಮಾಡಿದ್ದಕ್ಕೆ ಬಂಧಿಸಲಾಗಿದೆ.
ದೂರಿನ ಪ್ರಕಾರ ಬಂಧಿತ ತಿವಾರಿ 32 ವರ್ಷದ ಮೋಹ್ಸಿನ್ ಶೇಕ್ ಎಂಬುವರ ಬೈಕಿನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ಬರುತ್ತಿದ್ದರಂತೆ. ಈ ವೇಳೆ ಅವರನ್ನು ತಡೆದ ಪೇದೆ, ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ಹಾಕಿದ್ದಾರೆ. ಇದೇ ವಿಚಾರ ವಾಗ್ವಾದ ನಡೆದಿದೆ. ಗಲಾಟೆ ತಾರಕಕ್ಕೇರಿದಾಗ ತಿವಾರಿ ಪೇದೆ ಪಾರ್ತೆ ಅವರ ಯೂನಿಫಾರ್ಮ್ಗೆ ಕೈಹಾಕಿ ಎಳೆದಾಡಿ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಹ ಆರೋಪಿಯಾಗಿರುವ ಶೇಖ್ ಘಟನೆಯನ್ನು ವಿಡಿಯೋ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಆದರೆ, ತಿವಾರಿ ಪ್ರಕಾರ ಸಂಚಾರಿ ಪೇದೆ ಕೆಟ್ಟ ಪದಗಳಿಂದ ನಿಂದಿಸಿದರು. ಹೀಗಾಗಿ ಹಲ್ಲೆ ಮಾಡಬೇಕಾಯಿತು ಎಂದು ಪ್ರತ್ಯಾರೋಪ ಮಾಡಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಜಗಳವನ್ನು ಬಿಡಿಸಿ, ತಿವಾರಿ ಮತ್ತು ಶೇಖ್ನನ್ನು ಠಾಣೆಗೆ ಕರೆತಂದಿದ್ದಾರೆ. (ಏಜೆನ್ಸೀಸ್)