ನ್ಯೂಸ್

ಅತ್ಯಾಚಾರ ಆರೋಪಿಗೆ ನಿರೀಕ್ಷಣಾ ಜಾಮೀನು: ನ್ಯಾಯಾಲಯ ಕೊಟ್ಟ ಕಾರಣ ಹೀಗಿದೆ ನೋಡಿ..

ಮುಂಬೈ: ಅತ್ಯಾಚಾರ ಆರೋಪದ ಪ್ರಕರಣದಲ್ಲಿ 46 ವರ್ಷದ ವ್ಯಕ್ತಿಗೆ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಸಂತ್ರಸ್ತೆ ಮತ್ತು ಆರೋಪಿ ಸಹಮತದ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟದೆ.

ಮುಂಬೈನ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಪ್ರಕಾರ, ಪತಿಯಿಂದ ವಿಚ್ಛೇದನ ಪಡೆದಿದ್ದ ಸಂತ್ರಸ್ತೆಗೆ ಆರೋಪಿ 2023ರ ಅ.6ರಂದು ಮದುವೆಯಾಗುವುದಾಗಿ ಭರವಸೆ ನೀಡಿದ್ದು, ದೈಹಿಕ ಸಂಬಂಧ ಬೆಳೆಸಲು ಅನುಮತಿಸಿದ್ದಳು.

ಬಳಿಕ ನಿರಂತರವಾಗಿ ಮಹಿಳೆಯ ಜೊತೆ ದೈಹಿಕ ಸಂಪರ್ಕಹೊಂದಿದ್ದು, ಆಕೆ ಗರ್ಭಿಣಿಯಾಗಿದ್ದಳು. ಆದರೆ ಆರೋಪಿ ಕೆಲವು ಮಾತ್ರೆಗಳನ್ನು ನೀಡಿ ಗರ್ಭಪಾತ ಮಾಡಿಸಿದ್ದ. ಇದಾದ ಬಳಿಕ ಆತನಿಗೆ ಮತ್ತೊಂದು ಮಹಿಳೆ ಜೊತೆ ಸಂಪರ್ಕವಿರುವುದು ಹಾಗೂ ತನ್ನ ಪತ್ನಿ ಜೊತೆಗೆ ವಾಸವಿರುವುದು ದೂರುದಾರ ಮಹಿಳೆ ಗಮನಕ್ಕೆ ಬಂದಿದೆ. ಮಹಿಳೆ ತನ್ನನ್ನು ಆರೋಪಿ ನಂಬಿಸಿ ಅತ್ಯಾಚಾರವೆಸಗಿದ್ದಾನೆ. ಅಶ್ಲೀಲ ವೀಡಿಯೊಗಳು ತನ್ನ ಬಳಿ ಇವೆ ಎಂದು ಹೆದರಿಸಿ ಪದೇ ಪದೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಆಗಸ್ಟ್ 23, 2024 ರಂದು ದೂರು ದಾಖಲಿಸಿದ್ದಳು.

ಪ್ರಕರಣ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಆರೋಪಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಿದ ನ್ಯಾಯಾಧೀಶರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದಾರೆ. ಇದಕ್ಕೆ ಸಂತ್ರಸ್ತೆ ಮತ್ತು ಆರೋಪಿ ಸಹಮತದ ಸಂಬಂಧ ಹೊಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟದೆ.