ಮುಂಬೈ: ಎರಡು ಮಹಡಿಗಳಿರುವ, ಬೃಹದಾದ ಡಬಲ್ ಡೆಕ್ಕರ್ ಬಸ್ಗಳ ಬಗ್ಗೆ ಸಿನಿಮಾಗಳಲ್ಲಿ ನೋಡಿರುತ್ತೀವಿ. ಅಂತಹಾ ಬಸ್ಗಳಲ್ಲಿ ಒಮ್ಮೆಯಾದರೂ ಕೂರಬೇಕೆಂದು ಕನಸು ಕಂಡಿರುತ್ತೇವೆ. ಆದರೆ ನೀವಿನ್ನೂ ಡಬಲ್ ಡೆಕ್ಕರ್ ಬಸ್ಗಳಲ್ಲಿ ಪ್ರಯಾಣಿಸಿದ್ದರೆ ಒಳ್ಳೆಯದು. ಯಾಕೆಂದರೆ ಇನ್ನಾವತ್ತೂ ಅದರಲ್ಲಿ ಪ್ರಯಾಣಿಸಲು ಅವಕಾಶ ಸಿಗುವುದೇ ಇಲ್ಲ.
ಪ್ರವಾಸಿಗರ ನೆಚ್ಚಿನ ತಾಣ ಮುಂಬೈನಲ್ಲಿ ಬೆರಳೆಣಿಕೆಯಷ್ಟು ಕೆಂಪು ಡಬಲ್ ಡೆಕ್ಕರ್ ಬಸ್ಗಳು ಮಾತ್ರ ಉಳಿದುಕೊಂಡಿದ್ದವು. ಆದರೆ 86 ವರ್ಷಗಳ ಇತಿಹಾಸ ಇರುವ ಈ ಬಸ್ಗಳು ಸದ್ಯದಲ್ಲೇ ಪ್ರಯಾಣವನ್ನು ನಿಲ್ಲಿಸಲಿವೆ. ಒಂದು ಕಾಲದಲ್ಲಿ ಬಹಳ ಪ್ರಸಿದ್ಧವಾಗಿದ್ದ ಈ ಬಸ್ಗಳು ಈಗ ನಿರ್ವಹಣೆಯ ಕೊರತೆಯಿಂದ ನಿಲ್ಲಲಿವೆ.
ಉಳಿದಿದ್ದ 7 ಡಬಲ್ ಡೆಕರ್ ಬಸ್ಗಳು ರಸ್ತೆಗೆ ವಿದಾಯ ಹೇಳಲಿವೆ. ಸೆ.15ರಂದು 2 ಮತ್ತು ಅ.5 ರಂದು 5 ಬಸ್ಗಳು ತಮ್ಮ ಪ್ರಯಾಣವನ್ನು ಅಂತ್ಯಗೊಳಿಸಲಿವೆ. ಶತಮಾನಗಳ ಇತಿಹಾಸವಿರುವ ಈ ಬಸ್ಗಳನ್ನು ಸಂರಕ್ಷಿಸಿ, ಅನಿಕ್ ಡಿಪೋಟ್ ಮ್ಯೂಸಿಯಂನಲ್ಲಿ ಇಡಬೇಕು ಎಂದು ಪ್ರಯಾಣಿಕರು ಮುಂಬೈ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ಪೋರ್ಟ್(BEST) ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
1937ರ ಸುಮಾರಿಗೆ ಮುಂಬೈ ನಗರದಲ್ಲಿ ಈ ಬಸ್ಗಳು ಪ್ರಯಾಣ ಪ್ರಾರಂಭಿಸಿ, ದೇಶದೆಲ್ಲಡೆ ಖ್ಯಾತಿ ಗಳಿಸಿದ್ದವು. 1990ರ ಹೊತ್ತಿಗೆ 900 ಡಬಲ್ ಡೆಕ್ಕರ್ ಬಸ್ಗಳು ಪ್ರಯಾಣಿಕರಿಗೆ ನಗರದ ದರ್ಶನ ಮಾಡಿಸುತ್ತಿದ್ದವು. ಬಾಲಿವುಡ್ ಸಿನಿಮಾಗಳ ಮೂಲಕ ಪಗ್ರಯಾಣಿಕರ ಮನಸ್ಸನ್ನು ಇನ್ನಷ್ಟು ಗೆದ್ದವು. ಆದರೆ ಹೆಚ್ಚಾದ ನಿರ್ವಹಣಾ ವೆಚ್ಚದಿಂದ ಒಂದೊಂದೇ ಬಸ್ಗಳು ಮೂಲೆ ಸೇರಿದವು.
ಆದರೆ ಡಬಲ್ ಡೆಕ್ಕರ್ ಬಸ್ಗಳ ಮೇಲಿನ ಪ್ರವಾಸಿಗರ ಪ್ರೀತಿ ಮಾತ್ರ ಒಂಚೂರೂ ಕಡಿಮೆಯಾಗಲಿಲ್ಲ. ಬೃಹನ್ಮುಂಬೈ ಎಲೆಕ್ಟ್ರಿಕ್ ಸಪ್ಲೈ ಆ್ಯಂಡ್ ಟ್ರಾನ್ಸ್ಪೋರ್ಟ್ 25 ಹೊಸ ವಿದ್ಯುತ್ ಚಾಲಿತ ಡಬಲ್ ಡೆಕ್ಕರ್ ಬಸ್ಗಳನ್ನು ಪರ್ಯಾಯವಾಗಿ ಪರಿಚಯಿಸಿದರೂ ಜನ ಯಾಕೋ ನೆಚ್ಚಿಕೊಳ್ಳಲಿಲ್ಲ. ಇವುಗಳಿಗೆ ಎಸಿ ಸೌಲಭ್ಯವಿದ್ದರೂ, ಹಳೆಯ ಬಸ್ಗಳಲ್ಲಿ ಕಿಟಿಕಿಯಿಂದ ಬೀಸುವ ಗಾಳಿಯೇ ಚೆಂದ ಎನ್ನುತ್ತಿದ್ದಾರೆ ಪ್ರಯಾಣಿಕರು.