ನ್ಯೂಸ್

ಸೈಬರ್ ವಂಚಕರಿಂದ ಮುಂಬೈನವರು ಕಳೆದುಕೊಂಡಿದ್ದು ಬರೋಬ್ಬರಿ 650 ಕೋಟಿ!

ಮುಂಬೈ: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ಪ್ರಧಾನಿ ಮೋದಿಯವರ ಆದಿಯಾಗಿ ಯಾರು ಎಷ್ಟೇ ಹೇಳಿದರೂ ಜನ ಎಚ್ಚೆತ್ತುಕೊಂಡಿಲ್ಲ. ಮೊಬೈಲ್​ಗಳಲ್ಲಿ ನಯವಂಚಕರು ಹೆಣೆಯುವ ಮೋಸದ ಜಾಲಕ್ಕೆ ಬಿದ್ದು ಕೋಟಿ ಕೋಟಿ ಕಳೆದುಕೊಳ್ಳುತ್ತಲೇ ಇದ್ದಾರೆ. ಸೈಬರ್​ ವಂಚಕರಿಂದ ಮುಂಬೈಜನ ಕಳೆದುಕೊಂಡಿರುವ ಹಣ ಕೇಳಿದರೆ ಎಂಥವರೂ ದಂಗಾಗುವುದು ಖಚಿತ. ಈ ವರ್ಷದ ಜನವರಿಯಿಂದ ಜುಲೈವರೆಗೆ ಸೈಬರ್ ಬರೋಬ್ಬರಿ 650 ಕೋಟಿ ರೂ.ಗಳನ್ನು ಸೈಬರ್​ ವಂಚಕರಿಂದ ಕಳೆದುಕೊಂಡಿದ್ದಾರೆ.

ಸೈಬರ್ ಕ್ರೈಂ ಅಧಿಕಾರಿಗಳ ಪ್ರಕಾರ, ಈ ವರ್ಷ ವಿವಿಧ ಸೈಬರ್ ವಂಚನೆಗಳನ್ನು ವರದಿ ಮಾಡುವ ಸಹಾಯವಾಣಿಗೆ 36,000 ಕರೆಗಳು ಬಂದಿವೆ. ಇದರಲ್ಲಿ ಹೆಚ್ಚಿನ ದೂರುಗಳು ಷೇರು ವ್ಯಾಪಾರ ಹೂಡಿಕೆ ವಂಚನೆ, ಫೆಡ್ಎಕ್ಸ್ ಮತ್ತು ಇತರ ಕೊರಿಯರ್-ಸಂಬಂಧಿತ ಹಗರಣಗಳಾಗಿವೆ. ಅದೇ ರೀತಿ ಡಿಜಿಟಲ್ ಅರೆಸ್ಟ್​ ವಂಚನೆ, ಆನ್‌ಲೈನ್ ಕಾರ್ಯ ವಂಚನೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ದೂರುಗಳೂ ಹೆಚ್ಚಿಗೆ ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದರು.

ಇನ್ನು ಸೈಬರ್​ ಕ್ರೈಂ ವಿಭಾಗದ ಅಧಿಕಾರಿಗಳು ಬ್ಯಾಂಕ್‌ಗಳು, ವ್ಯಾಲೆಟ್ ಪೂರೈಕೆದಾರರು ಮತ್ತು ವ್ಯಾಪಾರಿಗಳು ಸೇರಿದಂತೆ ಪ್ರತಿ ದೂರಿನ ಮೇರೆಗೆ ನೋಡಲ್ ಅಧಿಕಾರಿಗಳೊಂದಿಗೆ ತ್ವರಿತವಾಗಿ ಕಾರ್ಯೋನ್ಮುಖರಾಗಿ ಮೂರನೇ ವ್ಯಕ್ತಿಗಳಿಗೆ ವರ್ಗಾಯಿಸುವ ಮೊದಲು ಬ್ಯಾಂಕ್ ಖಾತೆ ಮಟ್ಟದಲ್ಲಿ 100,84,57,854 ರೂ.ಗಳನ್ನು ಯಶಸ್ವಿಯಾಗಿ ಸ್ಥಗಿತಗೊಳಿಸಿದ್ದಾರೆ ಎಂದು ಅವರು ವಿವರಿಸಿದರು.