ನ್ಯೂಸ್

'17 ಶಾಸಕರನ್ನು ಮುಂಬೈಗೆ ಕಳಿಸಿದ್ದು ಯಾರು ಎಂಬುದನ್ನು ಸಿದ್ದರಾಮಣ್ಣನೇ ಹೇಳಬೇಕು...!'

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ಆಪರೇಶನ್​ ಕಮಲದ ಜನರ ಬಿ.ಎಸ್​.ಯಡಿಯೂರಪ್ಪ, ಸಮ್ಮಿಶ್ರ ಸರ್ಕಾರವನ್ನು ವಾಮಮಾರ್ಗದಿಂದ ಕೆಡವಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಂದಾಯ ಸಚಿವ ಆರ್​.ಅಶೋಕ್​ ತಿರುಗೇಟು ನೀಡಿದರು.

ಇಂದು ಶಿರಾದ ಬಿಜೆಪಿ ಚುನಾವಣಾ ಪ್ರಚಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಸಮ್ಮಿಶ್ರ ಸರ್ಕಾರ ಇದ್ದಾಗ 17 ಶಾಸಕರನ್ನು ಮುಂಬೈಗೆ ಕಳಿಸಿದ್ದು ಯಾರು ಅಂತಾ ಸಿದ್ದರಾಮಣ್ಣ ಹೇಳಬೇಕು. ಇನ್ನೂ 15 ವರ್ಷ ಬಿಜೆಪಿ ಪಕ್ಷದ ಆಡಳಿತ ಇರಲಿದೆ. ಈ ಸತ್ಯ ಕಾಂಗ್ರೆಸ್‌ನವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿದರು.

ಶಿರಾ ಉಪಸಮರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಲೇ ಸೋಲು ಒಪ್ಪಿಕೊಂಡಂತಿದೆ. ಹಣ, ಹೆಂಡ ಹಂಚುತ್ತಿದ್ದಾರೆಂದು ವಿಜಯೇಂದ್ರ ಹೆಸರು ಹೇಳುತಿದ್ದಾರೆ. ಪ್ರತಿಪಕ್ಷಗಳ ನಾಯಕರು ಯುದ್ಧಕ್ಕೆ ಮೊದಲೇ ಶಸ್ತ್ರ ತ್ಯಾಗ ಮಾಡಿದ್ದಾರೆ. ಅವರಿಗೆ ಬಿಜೆಪಿ ಭಯ ಕಾಡುತ್ತಿದೆ ಎಂದಿದ್ದಾರೆ.

ಜಯಚಂದ್ರ ಅವರಿಗೆ ಟಿಕೆಟ್ ಕೊಡುವುದು ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲಾ ಅವರಿಗೆ ಇಷ್ಟವಿರಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ಗೆ ಮೊದಲ ಸೋಲಿನ ರುಚಿಯನ್ನು ಬಿಜೆಪಿ ತೋರಿಸಲಿದೆ. ಅವರೊಂಥರ ಟೆಸ್ಟ್ ಡ್ರೈವ್ ಕಾರಿದ್ದಂತೆ. ಯೂಸ್ ಆ್ಯಂಡ್ ಥ್ರೋ ಮಾಡ್ತಾರೆ. ಕಾಂಗ್ರೆಸ್‌ನವರು ಡಿಕೆಶಿ ನಾ ಕಸದ ತೊಟ್ಟಿಗೆ ಹಾಕುತ್ತಾರೆ ಎಂದು ಛೇಡಿಸಿದರು.

ಸಿದ್ದರಾಮಯ್ಯ ಈಗೀಗ ಬಿಜೆಪಿಗೆ ಧಮ್ ಇದೆಯಾ ಅಂತಾರೆ. ಮುಂಚೆ ಹೀಗೆ ಹೇಳುತ್ತಿರಲಿಲ್ಲ. ಧಮ್ ಇರೋದ್ರಿಂದನೇ ರಾಮಮಂದಿರ ಕಟ್ಟಲು ಶಿಲನ್ಯಾಸ ಮಾಡಿದ್ದು, 370ನೇ ಕಾಯ್ದೆ, ತ್ರಿವಳಿ ತಲಾಖ್ ರದ್ದು ಮಾಡಿದ್ದು ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ಕರೊನಾ ಸಂದರ್ಭದಲ್ಲಿ ಸಿದ್ದರಾಮಯ್ಯ ಮನೆಯಲ್ಲಿ ಕೂತು ಕೊಂಡು ಗೇಟ್‌ಗೆ ನೋ ಎಂಟ್ರಿ ಬೋರ್ಡ ಹಾಕಿಕೊಂಡಿದ್ದರು. ಯಡಿಯೂರಪ್ಪ ಕೋವಿಡ್ ಸಂದರ್ಭದಲ್ಲಿ ಈ ವಯಸ್ಸಿನಲ್ಲೂ ಓಡಾಡಿ ಕೆಲಸ ಮಾಡಿದ್ದಾರೆ. ಆದರೂ, ಸಿದ್ದರಾಮಯ್ಯ ಆರೋಪ ಮಾಡುತ್ತಾರೆ. ಸಿದ್ದರಾಮಯ್ಯ ಡಬ್ಬಲ್ ಡಬ್ಬಲ್ ಮಾಸ್ಕ್ ಹಾಕೊಂಡು ಮನೆಯಲ್ಲಿ ಕೂತಿದ್ದರು. ಈಗ ಚುನಾವಣೆ ಅಂತಾ ಹೊರಗೆ ಬಂದಿದ್ದಾರೆ ಎಂದು ಲೇವಡಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ರವಿಕುಮಾರ್, ಬಿ.ಸುರೇಶಗೌಡ, ಎಸ್.ಆರ್.ಗೌಡ ಮತ್ತಿತರರು ಹಾಜರಿದ್ದರು.