ನ್ಯೂಸ್

ಬಕ್ರೀದ್‌ಗೆ ಮುಂಚಿತವಾಗಿ ಅಪಾರ್ಟ್ಮೆಂಟ್​ಗೆ ಮೇಕೆ ಕರೆ ತಂದ ವ್ಯಕ್ತಿಗೆ ತಟ್ಟಿತು ಪ್ರತಿಭಟನೆಯ ಬಿಸಿ!

ಮಹಾರಾಷ್ಟ್ರ: ಮುಸ್ಲಿಂ ಕುಟುಂಬವೊಂದು ಬಕ್ರೀದ್​ಗೆ ಮುಂಚಿತವಾಗಿ ಎರಡು ಆಡುಗಳನ್ನು ಅಪಾರ್ಟ್ಮೆಂಟ್​ಗೆ ಕರೆತಂದಿರುವ ಘಟನೆ ಥಾಣೆಯಲ್ಲಿ ನಡೆದಿದೆ. ಇದರಿಂದ ಆಕ್ರೋಶಿತಗೊಂಡ ಹತ್ತಿರದ ನಿವಾಸಿಗಳು ಹನುಮಾನ್ ಚಾಲೀಸಾ ಪಠಿಸಿ, ಜೈ ಶ್ರೀ ರಾಮ್ ಘೋಷಣೆ ಕೂಗುತ್ತಾ ಪ್ರತಿಭಟಿಸಿದ್ದಾರೆ.

ಮೊಹ್ಸಿನ್ ಖಾನ್ ಎಂಬಾತ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಬಲಿ ಕೊಡುವ ಉದ್ದೇಶದಿಂದ ಆಡುಗಳನ್ನು ಅಪಾರ್ಟ್ಮೆಂಟ್​ಗೆ ತಂದಿದ್ದಾ ಎಂದು ವರದಿಯಾಗಿದೆ. ಈತ ತನ್ನ ಪತ್ನಿ ಹಾಗೂ ಪುತ್ರನೊಂದಿಗೆ ಸೇರಿ ಲಿಫ್ಟ್ ಮೂಲಕ ಆಡುಗಳನ್ನು ಕರೆತರುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮೊಹ್ಸಿನ್ ಖಾನ್ ಬಕ್ರೀದ್ ಹಬ್ಬಕ್ಕೆ ಬಲಿ ಕೊಡುವ ಉದ್ದೇಶದಿಂದ ಆಡುಗಳನ್ನು ತಂದಿರುವ ವಿಚಾರ ಗೊತ್ತಾಗುತ್ತಿದ್ದಂತೆ ಅಪಾರ್ಟ್ಮೆಂಟ್​ ನಿವಾಸಿಗಳು ಪ್ರತಿಭಟನೆ ಇಳಿದಿದ್ದಾರೆ. ಇವರಿಗೆ ವಿವಿಧ ಹಿಂದು ಸಂಘಟನೆಯ ಕಾರ್ಯಕರ್ತರು ಸಾಥ್ ನೀಡಿದ್ದಾರೆ. ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಲಾಠಿ ಚಾರ್ಚ್ ನಡೆಸಿ ಪ್ರತಿಭಟನಾ ನಿರತರನ್ನು ಚದುರಿಸಿದ್ದಾರೆ. ಈ ಸಂಬಂಧ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

'ಅಪಾರ್ಟ್ಮೆಂಟ್​ಗೆ ಮೇಕೆಗಳನ್ನು ಕರೆತರುವುದು ಕಾನೂನಿಗೆ ವಿರುದ್ಧವಾಗಿದ್ದರೆ, ಅವರು ನಮ್ಮ ವಿರುದ್ಧ ಪೊಲೀಸ್ ದೂರು ನೀಡಬೇಕಾಗಿತ್ತು. ಪ್ರತಿಭಟಿಸಲು ಬಂದ ಗುಂಪು ನಮ್ಮ ಮೇಲೆ ಹಲ್ಲೆ ಮತ್ತು ಮಾನಸಿಕ ಕಿರುಕುಳ ನೀಡಿದೆ' ಎಂದು ಮೊಹ್ಸಿನ್ ಖಾನ್ ತಿಳಿಸಿರುವುದು ವರದಿಯಾಗಿದೆ.