ನ್ಯೂಸ್

ಕರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೇ ದಿಗ್ಬಂಧನ, ಯಾರಿಗೂ ಪ್ರವೇಶವಿಲ್ಲ, ಯಾರನ್ನೂ ಹೊರಬಿಡುತ್ತಿಲ್ಲ ಯಾಕೆ ಗೊತ್ತಾ?

ಮುಂಬೈ: ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆ ನೀಡಲೆಂದು ಕರೆ ತಂದಿದ್ದೇ ಈ ಆಸ್ಪತ್ರೆಗೆ ಮುಳುವಾಗಿದೆ. ಇದೀಗ ಆಸ್ಪತ್ರೆಗೆ ದಿಗ್ಬಂಧನ ವಿಧಿಸಲಾಗಿದ್ದು, ಕರೊನಾ ಪರೀಕ್ಷೆಯಲ್ಲಿ ನೆಗೆಟಿವ್​ ಫಲಿತಾಂಶ ಬರದ ಹೊರತು ಯಾರನ್ನೂ ಇಲ್ಲಿಂದ ಹೊರ ಬಿಡುವಂತಿಲ್ಲ, ಜತೆಗೆ ಬೇರಾರಿಗೂ ಈ ಆಸ್ಪತ್ರೆಗೆ ಪ್ರವೇಶ ನೀಡಲಾಗುತ್ತಿಲ್ಲ. ಏಕೆಂದರೆ, ಇಲ್ಲಿನ 26 ನರ್ಸ್​ಗಳು ಹಾಗೂ ಮೂರು ವೈದ್ಯರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ.

ಮುಂಬೈನಲ್ಲಿರುವ ವೋಕಾರ್ಡ್​ ಆಸ್ಪತ್ರೆಗೆ ಕಳೆದ ಮಾರ್ಚ್​ 20ರಂದು ಕಸ್ತೂರಬಾ ಆಸ್ಪತ್ರೆಯಿಂದ ಕೋವಿಡ್​-19 ಪೀಡಿತರನ್ನು ಚಿಕಿತ್ಸೆಗೆಂದು ಕರೆತರಲಾಗಿತ್ತು. ಈ ಪೈಕಿ ಇಬ್ಬರು ರೋಗಿಗಳಿಗೆ ಐಸೋಲೇಷನ್​ ವಾರ್ಡ್​ನಲ್ಲಿ ಇರಿಸಲಾಗಿತ್ತು. ಇನ್ನಿಬ್ಬರು ಶಂಕಿತರನ್ನು ಇತರ ರೋಗಿಗಳಿರುವ ಸಾಮಾನ್ಯ ತುರ್ತು ನಿಗಾ ಘಟಕದಲ್ಲಿಟ್ಟು (ಐಸಿಯು) ಆರೈಕೆ ಮಾಡಲಾಗುತ್ತಿತ್ತು.

ಇವರಿಗೆ ಚಿಕಿತ್ಸೆ ನೀಡುತ್ತಿದ್ದ ಸಾಮಾನ್ಯ ತುರ್ತು ನಿಗಾ ಘಟಕದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ನರ್ಸ್​ಗಳಿಗೆ ಮಾರ್ಚ್​ 28ರಂದು ಕರೊನಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಇದಾದ ಬಳಿಕ ಹಲವರಿಗೆ ಸೋಂಕು ವ್ಯಾಪಿಸಿದೆ ಎಂದು ಹೇಳಲಾಗಿದೆ. ಇದೀಗ 26 ನರ್ಸ್​ಗಳು ಹಾಗೂ ಮೂವರು ವೈದ್ಯರಿಗೆ ಸೋಂಕು ವ್ಯಾಪಿಸಿರುವುದು ದೃಢಪಟ್ಟಿದೆ.

ಹೀಗಾಗಿ ಇಡೀ ಆಸ್ಪತ್ರೆಯನ್ನೇ ಕರೊನಾ ಸೋಂಕಿತ ಪ್ರದೇಶ ಎಂದು ಬೃಹತ್​ ಮುಂಬೈ ಮಹಾನಗರ ಪಾಲಿಕೆ ಘೋಷಣೆ ಮಾಡಿದೆ. ಆಸ್ಪತ್ರೆಯಲ್ಲಿರುವ ಎಲ್ಲರನ್ನೂ ಕರೊನಾ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಪರೀಕ್ಷೆ ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್​ ಬಂದವರನ್ನಷ್ಟೇ ಹೊರಗೆ ಬಿಡಲಾಗುತ್ತಿದೆ. ಆಸ್ಪತ್ರೆಗೆ ಬೇರಾವ ರೋಗಿಗಳು ಹಾಗೂ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಪಾಲಿಕೆ ಆದೇಶ ಹೊರಡಿಸಿದೆ.

ಆಸ್ಪತ್ರೆಯ ನಿರ್ಲಕ್ಷ್ಯದ ಕಾರಣದಿಂದಾಗಿ ಅಲ್ಲಿದ್ದ 300 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಗುರಿಪಡಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.