ನ್ಯೂಸ್

ಆಸ್ಪತ್ರೆಯ ಒಂದು ಎಡವಟ್ಟು: 500ಕ್ಕೂ ಹೆಚ್ಚು ಜನರ ಜೀವಕ್ಕೆ ಕರೊನಾ ಕುತ್ತು!

ಮುಂಬೈ: ಮಹಾರಾಷ್ಟ್ರದಲ್ಲಿ ಕರೊನಾ ಸೋಂಕು ತನ್ನ ರೌದ್ರಾವತಾರವನ್ನು ವಿಸ್ತರಿಸುತ್ತಲೇ ಇದೆ. ಸೋಂಕಿತರು ಏರುತ್ತಿದ್ದರೂ ಗುಣಮುಖರಾಗುತ್ತಿರುವವರ ಸಂಖ್ಯೆ ಕಾಣದೇ, ಈ ವೈರಸ್​ ಭೀಕರ ರೂಪ ತಾಳುತ್ತಲಿದೆ. ಒಂದೆಡೆ ಕ್ಷಣಕ್ಷಣಕ್ಕೂ ಏರುತ್ತಿರುವ ಸೋಂಕಿತರು, ಇನ್ನೊಂದೆಡೆ, ಅದೇ ವೇಗದಲ್ಲಿ ಸಾವಿನ ಸಂಖ್ಯೆ, ಮತ್ತೊಂದೆಡೆ, ಶವಗಳನ್ನು ತೆಗೆದುಕೊಂಡು ಹೋಗಲು ಬಾರದ ಕುಟುಂಬಸ್ಥರು...

ಈ ನಡುವೆ ಅಕ್ಷರಶಃ ನಲುಗಿ ಹೋಗಿರುವ ಮುಂಬೈನ ಆಸ್ಪತ್ರೆಯೊಂದು ಮಾಡಿರುವ ಎಡವಟ್ಟಿನಿಂದ ಇದೀಗ 500ಕ್ಕೂ ಹೆಚ್ಚು ಜನರ ಮೇಲೆ ಕರೊನಾ ಭೀತಿ ಶುರುವಾಗಿದೆ.

ಅಷ್ಟಕ್ಕೂ ಆಗಿದ್ದೇನೆಂದರೆ, ಮೃತಪಟ್ಟ ರೋಗಿಯೊಬ್ಬನ ಕರೊನಾ ಟೆಸ್ಟ್​ ವರದಿಯನ್ನು ಕಾಯದೆ ಆಸ್ಪತ್ರೆ ಸಿಬ್ಬಂದಿ ಆತನ ಮೃದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಫ‌ಲಿತಾಂಶ ಬಂದಾಗ ಆ ವ್ಯಕ್ತಿಗೆ ಸೋಂಕು ಇದ್ದದ್ದು ದೃಢವಾಗಿರುವುದು! ಪಿತ್ತಜನಕಾಂಗದ ಸಮಸ್ಯೆಯೆಂದು 55 ವರ್ಷದ ವ್ಯಕ್ತಿಯೊಬ್ಬನನ್ನು ವಸಾಯ್‌ನಲ್ಲಿರುವ ದಿ ಕಾರ್ಡಿನಲ್‌ ಗ್ರೇಸಿಯಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಆತ ಮೃತಪಟ್ಟಿದ್ದ. ಜ್ವರ ಲಕ್ಷಣವೂ ಇದ್ದಿದ್ದರಿಂದ ಆತನ ಗಂಟಲು ದ್ರವ ಮಾದರಿಯನ್ನು ಲ್ಯಾಬ್‌ಗ ಕಳಿಸಲಾಗಿತ್ತು. ಫ‌ಲಿತಾಂಶ ಬರುವುದಕ್ಕೂ ಮುನ್ನವೇ ಆಸ್ಪತ್ರೆ ಸಿಬ್ಬಂದಿ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿಬಿಟ್ಟಿತು. ಆ ನಂತರ ಬಂದ ವರದಿಯಲ್ಲಿ ಕರೊನಾ ಸೋಂಕು ಇರುವುದು ತಿಳಿದಿದೆ!

ಈತನಿಗೆ ಕರೊನಾ ಸೋಂಕು ಇಲ್ಲ ಎಂದೇ ತಿಳಿದ ಕುಟುಂಬಸ್ಥರು, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಇದರಿಂದ ಇದೀಗ 500ಕ್ಕೂ ಅಧಿಕ ಮಂದಿಗೆ ಸಮಸ್ಯೆ ಉಂಟಾಗಿದೆ. ಇವರ ಪೈಕಿ 40 ಮಂದಿಯ ಸ್ಥಿತಿ ತೀರಾ ಅಪಾಯದಲ್ಲಿದೆ ಎನ್ನಲಾಗಿದೆ. ಮೊದಲೇ ಅತ್ಯಧಿಕ ಸೋಂಕಿತರಿಂದ ತುಂಬಿ ಹೋಗಿರುವ ಆಸ್ಪತ್ರೆಗಳು ಇದೀಗ ಈ 500 ಮಂದಿಯ ಪರೀಕ್ಷೆ ಮಾಡಬೇಕಾಗಿದೆ.

ಈ ನಡುವೆಯೇ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧೀನದಲ್ಲಿರುವ ರಾಷ್ಟ್ರೀಯ ಸಾಂಕ್ರಾಮಿಕ ರೋಗ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಮಹಾರಾಷ್ಟ್ರದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಪ್ರಮಾಣ ಶೇ. 20 ಕ್ಕಿಂತ ಹೆಚ್ಚಾಗುತ್ತಿದೆ. ಪರೀಕ್ಷೆಗೆ ಒಳಗಾಗುತ್ತಿರುವ 100 ಮಂದಿಯ ಪೈಕಿ 20ಕ್ಕೂ ಹೆಚ್ಚು ಜನರಿಗೆ ಪಾಸಿಟಿವ್ ದೃಢಪಡುತ್ತಿದೆ ಎಂದಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳ ಪ್ರಮಾಣವು ನಿರ್ವಹಿಸಲಾಗದಂತಹ ಸ್ಥಿತಿ ತಲುಪಬಹುದು ಎಂದು ಅನೇಕ ತಜ್ಞರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)