ಮುಂಬೈ: ಅದು ಮುಂಬೈನ್ ಗ್ರೇಟ್ ಇಂದಿರಾನಗರ ಪ್ರದೇಶ. ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನು 'ರೆಡ್ಝೋನ್' (ಕೆಂಪು ವಲಯ) ಎಂದು ಗುರುತಿಸಲಾಗಿದೆ.
ಇಲ್ಲಿನ ಜನರಿಗೆ ಕರೊನಾ ಸೋಂಕಿನ ಬಗ್ಗೆ ಬುದ್ಧಿಮಾತು ಹೇಳಲು ಹಾಗೂ ಅವರಿಗೆ ಅಗತ್ಯ ಇರುವ ಆಹಾರ ಧಾನ್ಯಗಳ ಪೂರೈಕೆ ಮಾಡುವ ಸಂಬಂಧ ಪೊಲೀಸ್ ಇಲಾಖೆ ಸಿಬ್ಬಂದಿ ಸದಾ ಇಂಥ ಪ್ರದೇಶಗಳಲ್ಲಿ ಸುತ್ತಾಡುವುದು ಮಾಮೂಲು.
ಅದರಂತೆಯೇ ಕೆಲ ವಾರಗಳ ಹಿಂದೆ ಗ್ರೇಟ್ ಇಂದಿರಾನಗರ ಪ್ರದೇಶದಲ್ಲಿ ಕೆಲ ಪೊಲೀಸರು ಗಸ್ತು ತಿರುಗುತ್ತಿದ್ದರು. ತಮ್ಮ ಕೆಲಸ ಮುಗಿಸಿ ಅವರು ವಾಪಸ್ ಬರುತ್ತಿದ್ದಂತೆಯೇ ಪುಟ್ಟ ಆಡಿನ ಮರಿಯೊಂದು ಈ ಪೊಲೀಸರಿಗೆ ಏನೋ ಹೇಳಬೇಕು ಎನ್ನುವಂತೆ ಹಿಂದಿಂದೆ ಓಡಿಬಂತು. ಪ್ರಾಣಿಗಳು ಹೀಗೆ ಜನರ ಹಿಂದೆ ಬರುವುದು ಸಾಮಾನ್ಯ ಎಂದುಕೊಂಡು ಮೊದಮೊದಲು ಪೊಲೀಸರು ಅದನ್ನು ನಿರ್ಲಕ್ಷಿಸಿದರು.
ಆದರೆ ಈ ಪುಟ್ಟ ಆಡು ಮಾತ್ರ ಪೊಲೀಸರನ್ನು ಬಿಡುವಂತೆ ಕಾಣಿಸಲಿಲ್ಲ. ಹಿಂದೆ ಇರುವ ಪೊಲೀಸರು ತನ್ನನ್ನು ನಿರ್ಲಕ್ಷ್ಯ ಮಾಡಿದರು ಎಂದು ಮುಂದೆ ಬಂದು ಗಮನಸೆಳೆಯಿತು. ಇದರ ನಡವಳಿಕೆ ಪೊಲೀಸರಿಗೆ ತೀರಾ ಅಚ್ಚರಿ ಎನಿಸಿತು. ಏಕೆಂದರೆ ಈ ಆಡಿನ ನಡವಳಿಗೆ ಸಾಮಾನ್ಯ ರೀತಿಯಲ್ಲಿ ಇರಲಿಲ್ಲ. ಅದನ್ನು ನೋಡಿದರೆ ನಾನೂ ನಿಮ್ಮೊಂದಿಗೆ ಬರುತ್ತೇನೆ ಎನ್ನುವಂತಿತ್ತು.
ಸರಿ. ನೀನೂ ಬಾ ಎಂದು ಹೇಳಿದ ಪೊಲೀಸರು ಅದರ ತಲೆ ನೇವರಿಸಿ ಕರೊನಾ ಜಾಗೃತಿ ಜಾಥಾದ ಅಂಗವಾಗಿ ಸುತ್ತಲಿನ ಪ್ರದೇಶಗಳಲ್ಲಿ ಸುತ್ತಾಡತೊಡಗಿದರು. ಏನಾಶ್ಚರ್ಯ ಈ ಆಡು ಕೂಡ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ತಾನೂ ಪೊಲೀಸ್ ಅಧಿಕಾರಿಯಂತೆ ಈ ಪೊಲೀಸರ ಜತೆಗೆ ನಡೆದುಕೊಂಡು ಹೋಯಿತು. ಸುಮಾರು ಮೂರು ಕಿಲೋಮೀಟರ್ ಪೊಲೀಸ್ ಗತ್ತಿನಲ್ಲಿಯೇ ಇದು ಅವರ ಜತೆ ಓಡಾಡಿತು.
ಇದನ್ನು ನೋಡಿದ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಇದರ ಗತ್ತು ನೋಡಿದ ಪೊಲೀಸರೇ ಅಚ್ಚರಿಪಟ್ಟರಂತೆ. ಕರೊನಾ ಪಾಠ ಮಾಡಲು ನಮ್ಮ ಜತೆ ಇದು ಬಂದಂತಿತ್ತು ಎಂದಿದ್ದಾರೆ ಅವರು. ಆ ಪ್ರದೇಶದ ಕರ್ತವ್ಯ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಾಗ, ಆಡಿನ ಮರಿ ಅವರನ್ನು ಬೀಳ್ಕೊಟ್ಟು ತನ್ನ ಮನೆಗೆ ವಾಪಸ್ ಹೋಯಿತು!
ಈ ಬಗ್ಗೆ ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ. 'ನಮ್ಮ ಜತೆ ಆಡಿನ ಮರಿಯ ಕಣ್ಣು ಕೂಡ ನಿಮ್ಮ ಮೇಲಿದೆ' ಎಂದು ಅದರಲ್ಲಿ ಬರೆಯಲಾಗಿದೆ. ತಮ್ಮ ಜತೆ ಆಡಿನ ಮರಿ ಹೊರಟಿರುವ ವೀಡಿಯೋ ಕೂಡ ಅವರು ಅಪ್ಲೋಡ್ ಮಾಡಿದ್ದಾರೆ. ಘಟನೆ ನಡೆದು ಕೆಲ ದಿನಗಳಾದರೂ ಈ ವೀಡಿಯೋ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಆಡಿನ ಮರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.