ನ್ಯೂಸ್

ನಾನ್​ ವೆಜ್​​ ವಿಚಾರಕ್ಕೆ ಲವರ್ಸ್​ ಮಧ್ಯೆ ಜಗಳ: ಮಹಿಳಾ ಪೈಲಟ್​ ಮನೆಯಲ್ಲಿ ಮಧ್ಯರಾತ್ರಿ ನಡೆಯಿತು ದುರಂತ | Srishti Tuli

Srishti Tuli : ಅವರಿಬ್ಬರೂ ಪೈಲಟ್‌ಗಳು. ತರಬೇತಿ ಸಮಯದಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಯಿತು. ಸುಮಾರು ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಯುವತಿಗೆ ನಾನ್ ವೆಜ್ ಅಂದರೆ ಇಷ್ಟ ಮತ್ತು ಯುವಕನಿಗೆ ವೆಜ್ ಅಂದರೆ ಇಷ್ಟ. ಆದರೆ, ಈ ವ್ಯತ್ಯಾಸವೇ ಅವರಿಬ್ಬರನ್ನು ಕಡು ವೈರಿಗಳನ್ನಾಗಿ ಮಾಡಿತು. ಕೊನೆಗೆ ಇದೇ ವ್ಯತ್ಯಾಸ ಒಬ್ಬರ ಪ್ರಾಣವನ್ನೇ ಕಸಿದುಕೊಂಡಿತು. ಹೌದು, ಇಂಥದ್ದೊಂದು ದುರಂತ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ ಮೂಲದ ಸೃಷ್ಟಿ ತುಳಿ (25) ಮತ್ತು ದೆಹಲಿಯ ಆದಿತ್ಯ ಪಂಡಿತ್ (27) ಇಬ್ಬರೂ ಪ್ರೇಮಿಗಳು. ಎರಡು ವರ್ಷಗಳ ಹಿಂದೆ ತಮ್ಮ ವಾಣಿಜ್ಯ ಪೈಲಟ್ ಲೈಸೆನ್ಸ್ (ಸಿಪಿಎಲ್) ತರಬೇತಿಯಲ್ಲಿದ್ದಾಗ ದೆಹಲಿಯಲ್ಲಿ ಭೇಟಿಯಾದರು. ಆರಂಭದಲ್ಲಿ ಶುರುವಾದ ಸ್ನೇಹ, ಪ್ರೀತಿಗೆ ತಿರುಗಿತು. ಸೃಷ್ಟಿ ತನ್ನ ತರಬೇತಿಯ ಸಮಯದಲ್ಲಿ ದೆಹಲಿಯ ದ್ವಾರಕಾದಲ್ಲಿ ಉಳಿದುಕೊಂಡಿದ್ದಳು. ತರಬೇತಿಯ ನಂತರ ಆಕೆಗೆ ಏರ್ ಇಂಡಿಯಾದಲ್ಲಿ ಕೆಲಸ ಸಿಕ್ಕಿತು. ತನ್ನ ಕೆಲಸದ ಭಾಗವಾಗಿ 2023ರ ಜೂನ್ ತಿಂಗಳಲ್ಲಿ ಮುಂಬೈಗೆ ಹೋದಳು.

ಇಬ್ಬರ ನಡುವೆ ನಾನ್ ವೆಜ್ ಆಹಾರದ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಆದಿತ್ಯ ಎಲ್ಲರ ಮುಂದೆಯೇ ಸೃಷ್ಟಿಯನ್ನ ನಿಂದಿಸುತ್ತಿದ್ದ. ಇದರಿಂದ ಆಕೆ ತೀವ್ರ ಮನನೊಂದಿದ್ದಳು. ಇಂದಲ್ಲ ನಾಳೆ ಸರಿ ಹೋಗುತ್ತೆ ಎಂದು ಭಾವಿಸಿದ್ದಳು. ಆದರೆ, ಆದಿತ್ಯ ಸ್ವಲ್ಪವೂ ಬದಲಾಗದೇ ನಾನ್ ವೆಜ್ ವಿಚಾರಕ್ಕಾಗಿ ಅನೇಕ ಬಾರಿ ಜಗಳವಾಡಿದ್ದ. ಹೀಗಿರುವಾಗ ಸೋಮವಾರ ಮುಂಜಾನೆ ಮುಂಬೈನ ಅಂಧೇರಿ (ಪೂರ್ವ) ಯಲ್ಲಿರುವ ಮರೋಲ್ ಪೊಲೀಸ್ ಕ್ಯಾಂಪ್ ಹಿಂಭಾಗದ ಮನೆಯಲ್ಲಿ ಸೃಷ್ಟಿ ಶವವಾಗಿ ಪತ್ತೆಯಾಗಿದೆ. ಸೃಷ್ಟಿಯ ಗೆಳೆಯ ಆದಿತ್ಯ ಕೊಲೆ ಮಾಡಿದ್ದಾನೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಶವವನ್ನು ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಕಳೆದ ಭಾನುವಾರ ಮುಂಬೈ ಮನೆಯಲ್ಲಿ ಸೃಷ್ಟಿ ಮತ್ತು ಆದಿತ್ಯ ನಡುವೆ ತೀವ್ರ ವಾಗ್ವಾದ ನಡೆದಿದೆ. ಜಗಳದ ಬಳಿಕ ಆದಿತ್ಯ, ಮಧ್ಯರಾತ್ರಿ ಒಂದು ಗಂಟೆಗೆ ದೆಹಲಿಗೆ ಹೊರಡಲು ಮುಂದಾದನು. ಆದರೆ, ಭಯದಿಂದ ಮನೆಗೆ ವಾಸಪ್​ ಬಂದು ನೋಡಿದಾಗ ಬಾಗಿಲು ಲಾಕ್ ಆಗಿತ್ತು. ವಾಚ್​ಮನ್ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ಸೃಷ್ಟಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಆಕೆಯನ್ನು ಮರೋಲ್‌ನ ಸೆವೆನ್ ಹಿಲ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಆಕೆ ಸತ್ತಿದ್ದಾಳೆಂದು ವೈದ್ಯರು ಘೋಷಿಸಿದರು. ಇದಾದ ಬಳಿಕ ಆದಿತ್ಯ, ಸೃಷ್ಟಿ ಕುಟುಂಬಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

ಮೃತ ಸೃಷ್ಟಿ ಅವರ ಕುಟುಂಬ ಸದಸ್ಯರ ದೂರಿನ ಮೇರೆಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಆದಿತ್ಯ ಅವರನ್ನು ಬಂಧಿಸಲಾಗಿದೆ ಎಂದು ಪೊವೈ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಜಿತೇಂದ್ರ ಸೋನಾವನೆ ತಿಳಿಸಿದ್ದಾರೆ. ಆರೋಪಿಯನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಇನ್ಸ್‌ಪೆಕ್ಟರ್ ಮಾಹಿತಿ ನೀಡಿದ್ದಾರೆ.

ಸಂತ್ರಸ್ತೆಯ ಕುಟುಂಬ ಸದಸ್ಯರು ಗೋರಖ್‌ಪುರದಲ್ಲಿ ನೆಲೆಸಿದ್ದಾರೆ. ಸೃಷ್ಟಿಯ ಗೆಳೆಯ ಆದಿತ್ಯ ಮಾಂಸಾಹಾರ ವಿಚಾರವಾಗಿ ಸಾರ್ವಜನಿಕರ ಮುಂದೆ ನಿಂದಿಸಿದ್ದರಿಂದ ಸೃಷ್ಟಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಈ ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸೃಷ್ಟಿಯ ಪಾಲಕರು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಸೃಷ್ಟಿಯ ಸಾವಿಗೆ ಆತ್ಮಹತ್ಯೆಯೇ ಕಾರಣ ಎಂದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಂತ್ರಸ್ತೆಯ ಫೋನ್ ಅನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ಕುಟುಂಬ ಸದಸ್ಯರಿಂದಲೂ ಪೊಲೀಸರು ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಾರೆ.

ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮುಂದೆಯೇ ಸೃಷ್ಟಿಯ ಗೆಳೆಯ ಆದಿತ್ಯ, ಆಕೆಗೆ ಕೆಟ್ಟದಾಗಿ ಕಿರುಕುಳ ನೀಡುತ್ತಿದ್ದ ಎಂದು ಸೃಷ್ಟಿಯ ಚಿಕ್ಕಪ್ಪ ವಿವೇಕ್​ ಕುಮಾರ್ ಹೇಳಿದ್ದಾರೆ. ಆದಿತ್ಯ ತಂಗಿಯ ನಿಶ್ಚಿತಾರ್ಥಕ್ಕೆ ಸೃಷ್ಟಿ ಹೋಗದ ಕಾರಣ ಕಿರುಕುಳ ಹೆಚ್ಚಾಯಿತು. ಸುಮಾರು 10 ದಿನಗಳ ಕಾಲ ಸೃಷ್ಟಿಯೊಂದಿಗೆ ಮಾತನಾಡಿಲ್ಲ. ಆತನ ಮಾನಸಿಕ ಕಿರುಕುಳದಿಂದಲೇ ಈ ದುರಂತ ಸಂಭವಿಸಿದೆ. ಒಮ್ಮೆ ಪಾರ್ಟಿಯೊಂದರಲ್ಲಿ ಮಾಂಸ ತಿಂದಿದ್ದಕ್ಕೆ ಸೃಷ್ಟಿಯ ಮೇಲೆ ಹಲ್ಲೆ ನಡೆಸಿದ್ದನು. ಆದರೆ, ಸೃಷ್ಟಿ, ಆದಿತ್ಯನನ್ನು ತುಂಬಾ ಪ್ರೀತಿಸುತ್ತಿದ್ದಳು. ಆದರೆ, ಆತ ಆಕೆಯನ್ನು ಕೆಟ್ಟದಾಗಿ ನಿಂದಿಸಿದ್ದಾನೆ ಎಂದು ವಿವೇಕ್ ಕುಮಾರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಇದರ ನಡುವೆ ಸೃಷ್ಟಿ ಭಾನುವಾರ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿವೆ. ಆಕೆಯ ತಾಯಿಯೊಂದಿಗೆ ಫೋನ್‌ನಲ್ಲಿಯೂ ಮಾತನಾಡಿದ್ದಾಳೆ. ಈ ವೇಳೆ ಆಕೆ ಕೂಲ್​ ಆಗಿಯೇ ಮಾತನಾಡಿದ್ದರಿಂದ ಯಾವುದೇ ಆತಂಕವಿರಲಿಲ್ಲ ಎಂದು ವಿವೇಕ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಅಂದಹಾಗೆ ಗೋರಖ್‌ಪುರದ ಮೊದಲ ಮಹಿಳಾ ಪೈಲಟ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸೃಷ್ಟಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸನ್ಮಾನಿಸಿದರು ಎಂದು ಇದೇ ಸಂದರ್ಭದಲ್ಲಿ ವಿವೇಕ್​ ಸ್ಮರಿಸಿದರು. ಬುಧವಾರ ಗೋರಖ್‌ಪುರದಲ್ಲಿ ಅಂತ್ಯಕ್ರಿಯೆ ಪೂರ್ಣಗೊಂಡಿದ್ದು, ನೂರಾರು ಜನರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ ಎಂದು ವಿವೇಕ್ ತಿಳಿಸಿದ್ದಾರೆ. (ಏಜೆನ್ಸೀಸ್​)