ಸಾಂದರ್ಭಿಕ ಚಿತ್ರ 
ನ್ಯೂಸ್

ಗೇಮ್ಸ್​ ಆಡಲು ಅಮ್ಮ ಮೊಬೈಲ್​ಫೋನ್​ ಕೊಡದ್ದಕ್ಕೆ ಆತ್ಮಹತ್ಯೆ ಮಾಡ್ಕೊಂಡ ಬಾಲಕ!

ಮುಂಬೈ: ಮಕ್ಕಳಲ್ಲಿ ಮೊಬೈಲ್​ಫೋನ್​ ಗೀಳು ಯಾವ ಪರಿಯಲ್ಲಿ ಆವರಿಸಿದೆ ಎಂಬುದಕ್ಕೆ ಇದೂ ಒಂದು ಉದಾಹರಣೆ. ಗೇಮ್ಸ್​ ಆಡಲು ಅಮ್ಮ ಮೊಬೈಲ್​ ಫೋನ್​ ಕೊಡಲಿಲ್ಲ ಎಂಬ ಕಾರಣಕ್ಕೆ ಇಲ್ಲೊಬ್ಬ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮುಂಬೈನಲ್ಲಿನ 16 ವರ್ಷದ ಬಾಲಕನೊಬ್ಬ ರೈಲಿಗೆ ದೇಹವೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಾಲಕ ಬುಧವಾರ ಮೊಬೈಲ್​ಫೋನ್​ನಲ್ಲಿ ಗೇಮ್ಸ್ ಆಡುತ್ತಿದ್ದಾಗ, ಫೋನ್ ಕಿತ್ತುಕೊಂಡ ತಾಯಿ ಓದು ಎಂದು ಗದರಿ, ಹೊರಹೋಗಿದ್ದರು.

ನಂತರ ಬಾಲಕ ಡೆತ್​ನೋಟ್ ಬರೆದಿಟ್ಟು ಮನೆಯಿಂದ ಹೊರಗೆ ಹೋಗಿದ್ದ. ಮನೆಗೆ ಬಂದ ತಾಯಿ ಡೆತ್​ನೋಟ್​ ನೋಡಿದ್ದು, ನಾನು ಮನೆಗೆ ವಾಪಸ್​ ಬರುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ಳಲಿದ್ದೇನೆ ಎಂದು ಮಗ ಅದರಲ್ಲಿ ಬರೆದಿಟ್ಟಿದ್ದು ಕಂಡುಬಂದಿತ್ತು.

ಕೂಡಲೇ ದಿಂಡೋಶಿ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದ್ದರು. ಪೊಲೀಸರು ಎಲ್ಲೆಡೆ ಹುಡುಕಾಟ ಆರಂಭಿಸಿದ್ದರು. ಇಂದು ಮಲಾಡ್ ಮತ್ತು ಖಾಂಡಿವಿಲಿ ಸ್ಟೇಷನ್ ಮಧ್ಯೆ ರೈಲ್ವೆ ಹಳಿಯೊಂದರಲ್ಲಿ ಬಾಲಕನ ಶವ ಪತ್ತೆಯಾದ ಮಾಹಿತಿ ಸಿಕ್ಕಿತ್ತು. ಈ ಮೇರೆಗೆ ಪೊಲೀಸರು ಪರಿಶೀಲನೆ ನಡೆಸಿದಾಗ, ಅದು ಡೆತ್​ನೋಟ್ ಬರೆದಿಟ್ಟು ಮನೆಬಿಟ್ಟು ಹೋಗಿದ್ದ ಬಾಲಕ ಎಂಬುದು ಖಚಿತಪಟ್ಟಿದೆ. ಬೊರಿವಿಲಿ ಗವರ್ನಮೆಂಟ್ ರೈಲ್ವೆ ಪೊಲೀಸ್​ ಪ್ರಕರಣ ದಾಖಲಿಸಿಕೊಂಡಿದ್ದಾರೆ.