ಮುಂಬೈ: ಬಿಎಂಡಬ್ಲ್ಯು ಕಾರು ಅಪಘಾತ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಶಾ ಅವರನ್ನು ಜುಲೈ 30 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಇಲ್ಲಿನ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.
ಇದನ್ನೂ ಓದಿ: ’ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ಶಾಸಕರು, ಮಾಜಿ ಮಂತ್ರಿಗಳು, ಸಚಿವರ ಪಾತ್ರ ಇದ್ದೇ ಇದೆ’: ಬಿ.ವೈ.ವಿಜಯೇಂದ್ರ
24ರ ಹರೆಯದ ಮಿಹಿರ್ ಶಾ ಶಿವಸೇನಾ ರಾಜಕಾರಣಿ ರಾಜೇಶ್ ಶಾ ಅವರ ಪುತ್ರ. ಈತ ಮದ್ಯದ ಅಮಲಿನಲ್ಲಿ ಬಿಎಂಡಬ್ಲ್ಯು ಅನ್ನು ಚಲಾಯಿಸಿದ್ದು, ಈ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು.
ಈ ಅಪಘಾತದಲ್ಲಿ 45 ವರ್ಷದ ಕಾವೇರಿ ನಖ್ವಾ ಎಂಬ ಮಹಿಳೆ ಸಾವಿಗೀಡಾಗಿದ್ದರು. ಜುಲೈ 7ರಂದು ಮುಂಬೈನ ವರ್ಲಿ ಆರ್ಟಿರಿಯಲ್ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಬೆಳಿಗ್ಗೆ 5:30ಕ್ಕೆ ಬಿಎಂಡಬ್ಲ್ಯು ಸ್ಕೂಟರ್ಗೆ ಹಿಂಬದಿಯಿಂದ ಗುದ್ದಿದ್ದರಿಂದ ಮಹಿಳೆ ಸಾವಿಗೀಡಾಗಿದ್ದು, ಆಕೆಯ ಪತಿ ಪ್ರದೀಪ್ ನಖ್ವಾ ಗಾಯಗೊಂಡಿದ್ದಾರೆ. ಘಟನೆ ನಡೆದು ಎರಡು ದಿನಗಳ ನಂತರ ಜುಲೈ 9 ರಂದು ಮಿಹಿರ್ನನ್ನು ಪಾಲ್ಘರ್ ಜಿಲ್ಲೆಯ ವಿರಾರ್‌ನಲ್ಲಿ ಬಂಧಿಸಲಾಗಿತ್ತು.
ಮಿಹಿರ್ನನ್ನು ಪೊಲೀಸರು ಇಂದು ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್‌ಪಿ ಭೋಸಲೆ ಅವರ ಮುಂದೆ ಹಾಜರುಪಡಿಸಿದರು. ಆರೋಪಿ ಪರಾರಿಯಾಗಿದ್ದ ವೇಳೆ ತನಗೆ ಆಶ್ರಯ ನೀಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಪೊಲೀಸರು ಆತನ ಬಂಧನ ಅವಧಿಯನ್ನು ವಿಸ್ತರಿಸುವಂತೆ ಕೋರಿದ್ದರು. ಪ್ರಕರಣದ ಗಂಭೀರತೆ ಪರಿಗಣಿಸಿ ಕಸ್ಟಡಿ ಅವಧಿ ವಿಸ್ತರಿಸುವಂತೆ ಸರ್ಕಾರಿ ವಕೀಲರಾ ರವೀಂದ್ರ ಪಾಟೀಲ್ ಮತ್ತು ಭಾರತಿ ಭೋಸ್ಲೆ ಅವರು ನ್ಯಾಯಾಲಕ್ಕೆ ವರದಿ ಸಲ್ಲಿಸಿದರು.
ಆರೋಪಿ ಮಿಹಿರ್ ಪರ ಪ್ರತಿವಾದ ಮಂಡಿಸಿದ ವಕೀಲರಾದ ಆಯುಷ್ ಪಾಸ್ಬೋಲಾ ಮತ್ತು ಸುಧೀರ್ ಭಾರದ್ವಾಜ್ ಇದಕ್ಕೆ ವಿರೋಧ ವ್ಯಕ್ತಪಡಿಸಿದರು.
ಎರಡೂ ಕಡೆಯ ವಾದ ಪ್ರತಿವಾದ ಕೇಳಿದ ನ್ಯಾಯಾಲಯ ಆರೋಪಿಯನ್ನು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.