ನ್ಯೂಸ್

ಗಗನಸಖಿಯ ಹತ್ಯೆ ಪ್ರಕರಣ; ಮನೆ ಕೆಲಸದವ ಅರೆಸ್ಟ್​!

ಮುಂಬೈ:  ಏರ್ ಇಂಡಿಯಾ ತರಬೇತಿಗಾಗಿ ಮುಂಬೈನಲ್ಲಿ ನೆಲೆಸಿದ್ದ ಗಗನಸಖಿಯ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಮನೆಗೆಲಸಗಾರ ವಿಕ್ರಮ್ ಅಟ್ವಲ್​ನನ್ನು ಪೂವೈ ಪೊಲೀಸರು ಬಂಧಿಸಿದ್ದರು.

ಫ್ಲಾಟ್​ನಲ್ಲಿ ಗಗನಸಖಿ ರೂಪಾ ಓಗ್ರೆ(24) ಹತ್ಯೆ ಪ್ರಕರಣದ ಆರೋಪಿ ತಪ್ಪೊಪ್ಪಿಕೊಂಡಿದ್ದು, ಅತ್ಯಾಚಾರ ಎಸಗಲು ಹೋಗಿ ಕೊಲೆ ನಡೆದಿದೆ ಎಂದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ.

ಕೊಲೆಯ ಆರೋಪಿಯಾಗಿದ್ದ ವಿಕ್ರಮ್ ಅಟ್ವಾಲ್(40)ನನ್ನು ಪೂವೈ ಪೊಲೀಸರು ಬಂಧಿಸಿದ್ದರು. ನ್ಯಾಯಾಲಯವು ಆರೋಪಿಯನ್ನು 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಈ ಸಮಯದಲ್ಲಿ ತಪ್ಪೊಪ್ಪಿಕೊಂಡಿರುವ ವಿಕ್ರಮ್, ಅತ್ಯಾಚಾರ ವಿಫಲವಾಗಿ ರೂಪಾ ತನ್ನನ್ನು ರಕ್ಷಿಸಿಕೊಳ್ಳಲು ದಾಳಿ ಮಾಡಿದಾಗ ವಿಧಿಯಿಲ್ಲದೇ ಕೊಲೆ ಮಾಡಬೇಕಾಯಿತು ಎಂದಿದ್ದಾನೆ.

ಕೊಲೆ ಮಾಡುವ 2 ದಿನಗಳ ಹಿಂದೆ ರೂಪಾ ಮನೆಗೆಲಸಗಾರ ವಿಕ್ರಮ್​ಗೆ ಕೆಲಸ ಸರಿಯಾಗಿ ಮಾಡುವಂತೆ ಬೈದಿದ್ದರು. ಇದರಿಂದ ಸಿಟ್ಟಿಗೆದ್ದು, ಅತ್ಯಾಚಾರ ಮಾಡಿ ಸೇಡು ತೀರಿಸಿಕೊಳ್ಳಲು ರೂಪಾ ಫ್ಲಾಟ್​ಗೆ ಹರಿತವಾದ ಚಾಕುವಿನ ಜತೆಗೆ ತೆರಳಿದ್ದಾನೆ. ಆದರೆ ಅತ್ಯಾಚಾರಕ್ಕೆ ಮುಂದಾಗುತ್ತಿದ್ದಂತೆ ವಿಕ್ರಮ್​ಗೆ ಹೊಡೆದು, ಆತನನ್ನು ದೂಡಿ, ಒದ್ದು, ರಕ್ಷಿಸಿಕೊಳ್ಳಲು ರೂಪಾ ಪ್ರಯತ್ನಿಸಿದ್ದಾಳೆ. ಆತ ತಂದಿದ್ದ ಚಾಕುವನ್ನು ಕಸಿದುಕೊಂಡು ತಿರುಗಿ ಹಲ್ಲೆ ಮಾಡುವ ಪ್ರಯತ್ನದಲ್ಲಿ ಚಾಕುವಿನ ತುದಿ ಆತನ ಹಣೆಗೆ ತಾಗಿ ಗಾಯವಾಗಿದೆ. ಆತನ ಮೈತುಂಬಾ ಪರಚಿದ ಗಾಯದ ಗುರುತುಗಳು ಪತ್ತೆಯಾಗಿವೆ.

ರೂಪಾ ನಡೆಸಿದ ಪ್ರತಿದಾಳಿಯಿಂದ ಹೈರಾಣಾಗಿ ಮನೆಯ ಮುಖ್ಯದ್ವಾರದಿಂದ ತಪ್ಪಿಸಿಕೊಂಡು ಓಡುವ ಭರದಲ್ಲಿ ಆಕೆಯ ಕತ್ತು ಸೀಳಿದ್ದಾನೆ. ನಂತರ ರಕ್ತದ ಕಲೆಗಳಾಗಿದ್ದ ತನ್ನ ಬಟ್ಟೆ ಮತ್ತು ಚಾಕುವನ್ನು ಬಚ್ಚಲಿನಲ್ಲಿ ತೊಳೆದು, ಬೇರೆ ಬಟ್ಟೆಯನ್ನು ಧರಿಸಿ ಫ್ಲಾಟ್​ನಿಂದ ಪರಾರಿಯಾಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಅರೆಸ್ಟ್​​ ಮಾಡಿದ್ದಾರೆ.