ಸೋಮವಾರಪೇಟೆ: ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆ, ಸಂಘದ ಅಧ್ಯಕ್ಷ ಎನ್.ಟಿ.ಪರಮೇಶ್ ಅದ್ಯಕ್ಷತೆಯಲ್ಲಿ ಚನ್ನಬಸಪ್ಪ ಸಭಾಂಗಣದಲ್ಲಿ ಭಾನುವಾರ ನಡೆಯಿತು.
ಸಂಘದ ಅಧ್ಯಕ್ಷ ಪರಮೇಶ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಸಂಘ ಒಟ್ಟು 40,01,532 ರೂ.ಗಳಷ್ಟು ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 18 ಲಾಭಾಂಶ ನೀಡಲು ಸಭೆ ತೀರ್ಮಾನಿಸಿದೆ. ಸಂಘದಲ್ಲಿ ಒಟ್ಟು 1133 ಸದಸ್ಯರಿದ್ದು, 83,01,234 ರೂ., ಪಾಲುಹಣ ಇರುತ್ತದೆ. ಸದಸ್ಯರು ಹಾಗೂ ವ್ಯಾಪಾರಸ್ಥರಿಗೆ ರೂ. 23,34,19,975 ರೂಗಳಷ್ಟು ಸಾಲ ವಿತರಿಸಲಾಗಿದೆ ಎಂದರು.
ಸಂಘದ ಸದಸ್ಯರಿಗೆ ತ್ವರಿತಗತಿಯಲ್ಲಿ ಸೇವೆ ಒದಗಿಸಲು ಸಂಘದಲ್ಲಿ ಕಂಪ್ಯೂಟರ್ ತಂತ್ರಾಂಶವನ್ನು ಅಳವಡಿಸುವುದರೊಂದಿಗೆ, ಎಲ್ಲ ವ್ಯವಹಾರಗಳನ್ನು ಗಣಕೀಕರಣ ಮಾಡಲಾಗಿದೆ. ಸದಸ್ಯರು ಮರಣ ನಿಧಿಯಲ್ಲಿ ನೋಂದಾಯಿಸಿಕೊಂಡವರಲ್ಲಿ ಆರು ಮಂದಿ ಸದಸ್ಯರು ಮೃತಪಟ್ಟ ಹಿನ್ನೆಲೆಯಲ್ಲಿ, ಅವರ ಕುಟುಂಬದವರಿಗೆ 60,000 ರೂ, ಪಾವತಿಸಲಾಗಿದೆ. ಓಡಿ ಸಾಲ, ವ್ಯಾಪಾರೋದ್ಯಮ ಸಾಲ, ಜಂಟಿ ಭಾದ್ಯತಾ ಗುಂಪು ಸಾಲ, ಪಿಗ್ಮಿ ಠೇವಣಿ ಆಧಾರ ಜಾಮೀನು ಸಾಲ ಮತ್ತು ಜಾಮೀನು ಸಾಲಗಳ ಭದ್ರತೆ ದೃಷ್ಟಿಯಿಂದ ಸಾಲಗಳ ವಿಮಾ ನಿಧಿಯನ್ನು ಪ್ರಾರಂಭಿಸಲಾಗಿದೆ. ಸದಸ್ಯರ ಕೋರಿಕೆಯಂತೆ ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ ತ್ವರಿತವಾಗಿ ಹಣ ವರ್ಗಾವಣೆ ಸೌಲಭ್ಯವನ್ನು ನೀಡುತ್ತಿದ್ದು, ಸದಸ್ಯರು ಬಳಸಿಕೊಳ್ಳಬೇಕೆಂದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿ. ಶಿವಪ್ಪ, ನಿರ್ದೇಶಕರುಗಳಾದ ಎಚ್.ಕೆ. ಮಾದಪ್ಪ, ಬಿ.ಎಂ. ರಾಮ್ ಪ್ರಸಾದ್, ಎಂ. ಶ್ರೀಕಾಂತ್, ಬಿ.ಆರ್. ಮೃತ್ಯುಂಜಯ, ಎಂ.ಸಿ. ರಾಘವ, ಎಚ್.ಎಸ್. ವೆಂಕಪ್ಪ, ಕೆ.ಬಿ. ಸುರೇಶ್, ಎಂ.ಜೆ. ದರ್ಶನ್, ಸಿ.ಎನ್. ಶೋಭಿತ, ಎಸ್.ಸಿ. ರೂಪಾ ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ. ತಾರಾ ಇದ್ದರು.