ತುಮಕೂರು: ದಕ್ಷಿಣ ಭಾರತದಲ್ಲೇ ಅತಿದೊಡ್ಡ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ತುಮಕೂರಿನಲ್ಲಿ ತಲೆಎತ್ತಲಿದೆ ! ತಾಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ನಿರ್ಮಿಸುವುದಾಗಿ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ.ಸೋಮಣ್ಣ ಹೇಳಿದರು.
ನಗರದ ಹೊರವಲಯದ ತಿಮ್ಮರಾಜನಹಳ್ಳಿಯಲ್ಲಿ ಶನಿವಾರ ರೈಲ್ವೆ ಕಾಮಗಾರಿಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ಪಾದನಾ ಸಾಮಗ್ರಿ, ಸರಕು ಸಾಗಣೆ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ತಿಮ್ಮರಾಜನಹಳ್ಳಿಯಲ್ಲಿ ಗೂಡ್ಸ್ ರ್ಟಮಿನಲ್ ನಿರ್ಮಿಸಲಾಗುತ್ತಿದ್ದು ಇದಕ್ಕೆ ಹೊಂದಿಕೊಂಡಂತೆ ವಸತಂನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಪೂರಕವಾಗಿ ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲಾಗುವುದು. ಬಹುಪಯೋಗಿ ಈ ಲಾಜಿಸ್ಟಿಕ್ ಪಾರ್ಕ್ ದಕ್ಷಿಣ ಭಾರತದ ಅತಿ ದೊಡ್ಡ ಲಾಜಿಸ್ಟಿಕ್ ಪಾರ್ಕ್ ಆಗಲಿದೆ ಎಂದರು.
88 ಸಾವಿರ ಉದ್ಯೋಗ ಸೃಷ್ಟಿ: 3 ಹಂತದಲ್ಲಿ ಪಿಎಂ ಗತಿಶಕ್ತಿ ಯೋಜನೆ ಅಡಿ ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಅಭಿವೃದ್ಧಿಪಡಿಸಲು ಪ್ರಧಾನಿ ಮೋದಿ 2023ರಲ್ಲಿ ಅಡಿಗಲ್ಲು ಹಾಕಿದ್ದಾರೆ. ಮೊದಲ ಹಂತದಲ್ಲಿ 1668 ಎಕರೆ ಪ್ರದೇಶದಲ್ಲಿ 1700 ಕೋಟಿ ರೂ., ವೆಚ್ಚದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲಾಗುವುದು. ಆಟೋಮೊಬೈಲ್, ಎಲೆಕ್ಟ್ರಿಕಲ್ ಡಿಸೈನರ್, ಬಯೋಟೆಕ್, ಸಾರಿಗೆ, ಕೈಗಾರಿಕಾ ಉತ್ಪಾದನೆ, ವಸ್ತ್ರ ತಯಾರಿಕೆ, ಆಹಾರ ಸಂಸ್ಕರಣೆಗೆ ಹೆಚ್ಚಿನ ಆದ್ಯತೆ ಕೊಡುವ ಮೂಲಕ ಕೈಗಾರಿಕಾ ಕ್ರಾಂತಿಗೆ ಮುನ್ನುಡಿ ಬರೆಯಲಾಗುವುದು ಎಂದು ವಿ.ಸೋಮಣ್ಣ ಹೇಳಿದರು.
ಫೇಸ್ 1ರಲ್ಲಿ 88,500 ಉದ್ಯೋಗ ಸೃಷ್ಟಿಯಾಗಲಿದೆ. ಒಟ್ಟು 7 ಸಾವಿರ ಕೋಟಿ ರೂ ವೆಚ್ಚ ಯೋಜನೆ ಪಿಎಂ ಗತಿಶಕ್ತಿ. ಸಾರ್ವಜನಿಕ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಜನ ಆಸಕ್ತಿ ತೋರಿಸಿದ್ದರು. ಆದರೆ ನಾವು ಸರ್ಕಾರದಿಂದಲೇ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ತುಮಕೂರು ಕೈಗಾರಿಕಾ ವಲಯವು ಬೆಂಗಳೂರು &ಚೆನ್ನೆ ಕಾರಿಡಾರ್ ಭಾಗವಾಗಿದೆ. ಉತ್ಪಾದನಾ ಸಾಮಗ್ರಿ, ಸರಕು ಸಾಗಣೆ ವೆಚ್ಚವನ್ನು ರೈಲ್ವೆ ಮೂಲಕ ಕಡಿಮೆ ಮಾಡಲು ಯೋಜಿಸಲಾಗಿದೆ. 6 ರಾಷ್ಟ್ರೀಯ ಹೆದ್ದಾರಿಗಳು ಈ ಭಾಗದಲ್ಲಿ ಹಾದು ಹೋಗುತ್ತಿದ್ದು, ತಿಮ್ಮರಾಜನಹಳ್ಳಿಯಲ್ಲಿ ರೈಲ್ವೆ ನಿಲ್ದಾಣದ ಜತೆಗೆ ಲಾಜಿಸ್ಟಿಕ್ ಪಾರ್ಕ್ಗೆ ಪೂರಕವಾಗಿ ಗೂಡ್ಸ್ ರ್ಟಮಿನಲ್ ನಿರ್ಮಿಸಲಾಗುವುದು ಎಂದರು.
ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ್, ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.