ಚಿಕ್ಕಮಗಳೂರಿನ ಎಂ.ಇ.ಎಸ್. ವಿದ್ಯಾಸಂಸ್ಥೆಯಲ್ಲಿ ಪೂರ್ವಿ ಗಾನಯಾನ ಕಾರ್ಯಕ್ರಮವನ್ನು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಉದ್ಘಾಟಿಸಿದರು. ರಮೇಶ್, ಟಿ.ನಾರಾಯಣ ಸ್ವಾಮಿ, ಕವಿತಾ ನಿಯತ್, ಎಂ.ಎಸ್.ಸುಧೀರ್, ರೂಪಾ ನಾಯ್ಕ ಇತರರಿದ್ದರು. 
ನ್ಯೂಸ್

ಮುಖೇಶ್ ಮೇರು ಗಾಯಕ

ಕಿರುವಾರ ಎಸ್.ಸುದರ್ಶನ್

ಚಿಕ್ಕಮಗಳೂರು: ಹಿಂದಿ ಚಲನಚಿತ್ರ ರಂಗದಲ್ಲಿ ಮುಖೇಶ್ ಮೇರು ಗಾಯಕರಾಗಿದ್ದಾರೆ. ಅವರ ನೆನಪಿನಲ್ಲಿ ಸಂಗೀತ ಸುಧೆಯುಣಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಲೆನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್.ಕೇಶವಮೂರ್ತಿ ಹೇಳಿದರು.

ನಗರದ ಎಂಇಎಸ್ ಕಾಲೇಜಿನಲ್ಲಿ ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಯುರೇಕಾ ಅಕಾಡೆಮಿ ಹಾಗೂ ಲಯನ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಹಿಂದಿ ಚಿತ್ರರಂಗದ ಖ್ಯಾತ ಗಾಯಕ ಮುಖೇಶ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಪೂರ್ವಿ ಗಾನಯಾನ-90 ಆಯೋಜಿಸಿದ್ದ ಮುಖೇಶ್ ಒಂದು ನೆನಪು ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿಂದಿನಿಂದಲೂ ಡಾ.ರಾಜ್ ಕುಮಾರ್, ಲತಾ ಮಂಗೇಶ್ಕರ್, ಎಸ್.ಜಾನಕಿ, ಮಹಮ್ಮದ್ ರಫೀ, ಡಾ.ಎಸ್.ಪಿ. ಬಾಲಸುಬ್ರಹ್ಮಣ್ಯಂ ಮುಂತಾದ ಹಿರಿಯ ಗಾಯಕರ ನೆನಪಿನಲ್ಲಿ ಗಾಯನ ಕಾರ್ಯಕ್ರಮಗಳನ್ನು ಏರ್ಪಡಿಸಿ ಪೂರ್ವಿತಂಡ ನಗರದ ಜನತೆಗೆ ರಸದೌತಣವನ್ನು ನೀಡುತ್ತಿದೆ ಎಂದು ಶ್ಲಾಘಿಸಿದರು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಟಿ.ನಾರಾಯಣ ಸ್ವಾಮಿ ಮಾತನಾಡಿ, 53 ವರ್ಷವಷ್ಟೇ ಬದುಕಿದ್ದ ಮುಖೇಶ್ ಅವರು ಗಾಯನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅವರ ಈ ಸಾಧನೆ ಶಾಶ್ವತ ಎಂದು ಬಣ್ಣಿಸಿದರು.
ಗಾಯಕಿ ಕವಿತಾ ನಿಯತ್ ಮಾತನಾಡಿ, ನಾವು ಕಲಾವಿದರು ಎಷ್ಟೇ ಚೆನ್ನಾಗಿ ಹಾಡಿದರೂ ಕಲಾಸಕ್ತರ ಸಹಕಾರ ಇಲ್ಲದಿದ್ದರೆ ನಮ್ಮ ಪ್ರಯತ್ನ ವ್ಯರ್ಥ. ಪ್ರತೀ ಬಾರಿಯೂ ಪ್ರೋತ್ಸಾಹಿಸುತ್ತಿರುವುದು ನಮಗೆ ಸ್ಫೂರ್ತಿ ಎಂದರು. ಗಾಯಕ ಎಂ.ಎಸ್.ಸುಧೀರ್ ಸಾರಥ್ಯದಲ್ಲಿ ರಾಯನಾಯಕ್, ವೆಂಕಟೇಶ್, ದರ್ಶನ್, ಚೈತನ್ಯ, ಶ್ರೀಕಾಂತ್, ಕವಿತಾ ನಿಯತ್, ರೂಪಾ ಅಶ್ವಿನ್, ಅನುಷಾ, ರುಕ್ಸಾನಾ ಕಾಜೂರ್, ಲಾಲಿತ್ಯ, ತುಮಕೂರಿನ ಪೂಜ್ಯ ಹಾಗೂ ಬೆಂಗಳೂರಿನ ಅನುರಾಧ ಭಟ್ ಮುಖೇಶ್ ಗೀತೆಗಳಿಗೆ ಧ್ವನಿಯಾಗಿ ರಂಜಿಸಿದರು. ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಸುಧೀರ್ ಸ್ವಾಗತ, ರೂಪಾ ನಾಯಕ್, ಗಾಯಕ ರಾಯನಾಯಕ ಇದ್ದರು.