ನ್ಯೂಸ್

ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಅಂಬಾನಿ ಕುಟುಂಬ

ಮುಂಬೈ: ದೇಶದ ಶ್ರೀಮಂತ ಉದ್ಯಮಿ ಮುಕೇಶ್​ ಅಂಬಾನಿ, ಪತ್ನಿ ನೀತಾ ಅಂಬಾನಿ ಮತ್ತು ಅವರ ಕುಟುಂಬದ ಇತರೆ ಸದಸ್ಯರು ಭಾನುವಾರ (ಸೆ.24) ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಗಣಪತಿಯ ಆಶೀರ್ವಾದ ಪಡೆದುಕೊಂಡರು.

ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ತಮ್ಮ ಮಕ್ಕಳಾದ ಇಶಾ ಮತ್ತು ಅನಂತ್​ ಜತೆಯಲ್ಲಿ ಆಗಮಿಸಿದರು. ಇದೇ ಸಂದರ್ಭದಲ್ಲಿ ಅಂಬಾನಿ ಅವರು ತಮ್ಮ ಮುದ್ದಾದ ಮೊಮ್ಮಕ್ಕಳೊಂದಿಗೆ ಕಾಣಿಸಿಕೊಂಡರು. ಮೊಮ್ಮಕ್ಕಳನ್ನು ಗಣೇಶನ ಪಾದದಡಿಯಲ್ಲಿ ಇಟ್ಟು ವಿಶೇಷ ಆಶೀರ್ವಾದವನ್ನು ಸಹ ನೀಡಲಾಯಿತು.

ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮುಕೇಶ್ ಅಂಬಾನಿ ಅವರು ಕಂದು ಬಣ್ಣದ ಜಾಕೆಟ್ ಜತೆಗೆ ಬಿಳಿ ಕುರ್ತಾವನ್ನು ಧರಿಸಿದ್ದರು. ನೀತಾ ಅಂಬಾನಿ ತಿಳಿ ಗುಲಾಬಿ ಬಣ್ಣದ ಕುರ್ತಾ ತೊಟ್ಟಿದ್ದರು. ಇಶಾ ಅಂಬಾನಿ ನೀಲಿ ಬಣ್ಣದ ಕುರ್ತಾ ಹಾಗೂ ಗುಲಾಬಿ ಬಣ್ಣದ ದುಪಟ್ಟಾದಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ, ಅನಂತ್ ಅಂಬಾನಿ ನೇರಳೆ ಬಣ್ಣದ ಕಾಲರ್ ಟೀ ಶರ್ಟ್‌ನಲ್ಲಿ ಕಾಣಿಸಿಕೊಂಡರು.

ಇತ್ತೀಚೆಗಷ್ಟೇ ಮುಕೇಶ್​ ಅಂಬಾನಿ ಮತ್ತು ನೀತಾ ಅಂಬಾನಿ ಅವರು ತಮ್ಮ ಮುಂಬೈ ನಿವಾಸ ಅಂಟಿಲಿಯಾದಲ್ಲಿ ಗಣೇಶ ಚತುರ್ಥಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಿದರು. ಬಾಲಿವುಡ್​, ಕ್ರೀಡೆ, ಉದ್ಯಮ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಅಂಬಾನಿ ಮನೆಯ ಸಂಭ್ರಮದ ಗಣೇಶೋತ್ಸವಕ್ಕೆ ಸಾಕ್ಷಿಯಾದರು.

ಹಿಂದೂ ಚಾಂದ್ರಮಾನ ಕ್ಯಾಲೆಂಡರ್ ತಿಂಗಳ 'ಭಾದ್ರಪದ'ದ ನಾಲ್ಕನೇ ದಿನದಂದು ಆರಂಭವಾಗುವ ಹತ್ತು ದಿನಗಳ ಹಬ್ಬ ಗಣೇಶ ಚತುರ್ಥಿ ಮಂಗಳವಾರ (ಸೆ.19) ದಿಂದ ಪ್ರಾರಂಭವಾಯಿತು. ಹತ್ತು ದಿನಗಳ ಈ ಮಂಗಳಕರ ಹಬ್ಬವು 'ಚತುರ್ಥಿ' ಯಿಂದ ಪ್ರಾರಂಭವಾಗಿ 'ಅನಂತ ಚತುರ್ದಶಿ' ಯಂದು ಕೊನೆಗೊಳ್ಳುತ್ತದೆ. (ಏಜೆನ್ಸೀಸ್​)