ನ್ಯೂಸ್

ಮುಜರಾಯಿ ಇಲಾಖೆ ಸುಪರ್ದಿಗೆ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನ| Gali Anjaneya Temple

ಬೆಂಗಳೂರು: ಬೆಂಗಳೂರು ಹಾಗೂ ಮೈಸೂರು ರಸ್ತೆಯಲ್ಲಿನ ಬ್ಯಾಟರಾಯನಪುರದಲ್ಲಿರುವ ಗಾಳಿ ಆಂಜನೇಯ ದೇವಸ್ಥಾನವನ್ನು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ವರ್ಗಾಯಿಸುವಂತೆ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ದೇವಸ್ಥಾನದ ಆಡಳಿತ ಮಂಡಳಿಯ ಕೆಲವು ಸದಸ್ಯರು ಹುಂಡಿ ಹಣ ಎಣಿಸುವಾಗ ಹಣವನ್ನು ಎಗರಿಸಿದ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಈ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಮಾಹಿತಿ ದಾಖಲಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ಸರ್ಕಾರ ಸೂಚನೆಯನ್ನು ಸಹ ನೀಡಿತ್ತು. ಈ ಘಟನೆಯ ಬಗ್ಗೆ ಇತ್ತೀಚೆಗೆ ಮುಜರಾಯಿ ಇಲಾಖೆ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿತ್ತು. ಗಾಳಿ ಆಂಜನೇಯ ದೇವಸ್ಥಾನವನ್ನ ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸು ಮಾಡಲಾಗಿತ್ತು. ಇದನ್ನು ಒಪ್ಪಿರುವ ರಾಜ್ಯ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಎಂದು ಘೋಷಣೆ ಹೊರಡಿಸಿದೆ.

ಆದೇಶದಲ್ಲಿ ಏನಿದೆ?

ಬ್ಯಾಟರಾಯನಪುರದಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಾಲಯವನ್ನು ಅವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸುತ್ತಿರುವುದು ಮತ್ತು ಹಣ ದುರುಪಯೋಗಪಡಿಸಿಕೊಂಡಿರುವುದು, ಟ್ರಸ್ಟ್​ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲದಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಪ್ರಸ್ತಾಪಿತ ದೇವಾಲಯವನ್ನು ‘ಕರ್ನಾಟಕ ಹಿಂದೂ ಧಾರ್ಮಿಕ ಸಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, ಘೋಷಿತ ಸಂಸ್ಥೆ ಎಂದು ಘೋಷಿಸಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.

(ಏಜೆನ್ಸೀಸ್)

ದೇವಸ್ಥಾನದ ಆಡಳಿತದಲ್ಲಿ ಲೋಪಗಳು ಕಂಡುಬಂದರೆ ಅಥವಾ ಹಣದ ದುರ್ಬಳಕೆಯ ಆರೋಪಗಳು ತಿಳಿದುಬಂದರೆ, ಅಂತಹ ದೇವಸ್ಥಾನವನ್ನು ಘೋಷಿತ ಸಂಸ್ಥೆಯನ್ನಾಗಿ ಘೋಷಿಸಿ, ಮುಜರಾಯಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬಹುದು. ಈ ಕಾಯ್ದೆಯು ದೇವಾಲಯದ ಆಸ್ತಿಯ ರಕ್ಷಣೆ, ಹಣದ ಸಮರ್ಪಕ ನಿರ್ವಹಣೆ, ಮತ್ತು ಭಕ್ತರ ಹಿತಾಸಕ್ತಿಯನ್ನು ಕಾಪಾಡುವ ಗುರಿಯನ್ನು ಹೊಂದಿದೆ.