ಕೋಲಾರದ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ರಿಂಗ್​ ರೋಡ್​ ಸಂಬಂಧ ಸಭೆ ಹಮ್ಮಿಕೊಳ್ಳಲಾಗಿತ್ತು. ಕೊತ್ತೂರು ಜಿ.ಮಂಜುನಾಥ್​, ಎಂ.ಮಲ್ಲೇಶ್​ ಬಾಬು, ಎಂ.ಎಲ್​.ಅನಿಲ್​ ಕುಮಾರ್​, ರಾಮೂರ್ತಿ, ರತ್ನಕರ ರೆಡ್ಡಿ ಇದ್ದರು. 
ನ್ಯೂಸ್

ವರ್ತುಲ ರಸ್ತೆ ನಿರ್ಮಾಣಕ್ಕೆ ಮುಹೂರ್ತ

ಕೋಲಾರ: ನಗರ ಹೊರವಲಯದಲ್ಲಿ ವರ್ತುಲ ರಸ್ತೆ (ರಿಂಗ್​ ರೋಡ್​) ನಿರ್ಮಾಣದ ಚಟುವಟಿಕೆಗಳು ಗರಿಗೆದರಿವೆ.

ಈಗಾಗಲೇ ರಿಂಗ್​ ರೋಡ್​ ನಿರ್ಮಾಣ ಕುರಿತು ಸಾಧಕ&ಬಾಧಕಗಳನ್ನು ಕಳೆದ 2024ರ ಸೆ.1ರಂದು ಬೆಂಗಳೂರಿನಲ್ಲಿ ತಜ್ಞರೊಂದಿಗೆ ಜಿಲ್ಲೆಯ ಜನಪ್ರತಿಧಿಗಳು ಚರ್ಚಿಸಿದ್ದರು. ಹಂತಹಂತವಾಗಿ ಕ್ರಮಕೈಗೊಂಡಿದ್ದು, ಡಿಪಿಆರ್​ ತಯಾರಿಗೆ ಕ್ರಮವಹಿಸುವ ಮೂಲಕ ಅನುದಾನ ಮೀಸಲಿರಿಸಲಾಗಿದೆ.

ಡಿಪಿಆರ್​ ತಯಾರಿಸಿ ಟೆಂಡರ್​ ಕರೆಯುವ ಹಂತಕ್ಕೆ ಬಂದಿದ್ದು, ಪೂರ್ವಭಾವಿಯಾಗಿ ನಗರದ ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಗುರುವಾರ ಜನಪ್ರತಿನಿಧಿಗಳು, ತಜ್ಞರು ಹಾಗೂ ಅಧಿಕಾರಿಗಳು ಸಭೆ ನಡೆಸಿದರು.

ರಸ್ತೆ ನಿರ್ಮಾಣ ಕುರಿತು ಡಿಪಿಆರ್​ ತಯಾರಿ, ರಸ್ತೆ ವ್ಯಾಪ್ತಿ, ಭೂಸ್ವಾಧಿನ, ಅಡೆತಡೆಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ರಾಮಮೂರ್ತಿ ಮಾಹಿತಿ ನೀಡಿದರು.

ಸಮಗ್ರ ಯೋಜನಾ ವರದಿ (ಡಿಪಿಆರ್​) ಸಿದ್ಧಪಡಿಸಲು ಸರ್ಕಾರವು 2.84 ಕೋಟಿ ವೆಚ್ಚದಲ್ಲಿ ಟೆಂಡರ್​ ಕರೆಯಲು ಸಿದ್ಧತೆ ಕೈಗೊಂಡಿದ್ದು, ಇದಕ್ಕೆ ಸರ್ಕಾರದ ಹಂತದಲ್ಲಿ ತೀರ್ಮಾನವಾಗಬೇಕಿದೆ ಎಂದು ತಿಳಿಸಿದರು.

ಮುಂಬರುವ ವರ್ಷಗಳ ಸಂಚಾರ ದಟ್ಟಣೆ ಗಮನದಲ್ಲಿಟ್ಟುಕೊಂಡೇ ರಿಂಗ್​ ರಸ್ತೆ ನಿಮಾರ್ಣ ಮಾಡಲಾಗುವುದು. ಬೇಗನೇ ಆದರೆ ಕಡಿಮೆ ವೆಚ್ಚ ತಗಲುತ್ತದೆ. ತಡವಾದರೆ ವೆಚ್ಚ ಹೆಚ್ಚಳವಾಗುತ್ತದೆ ಎಂದು ಸಭೆಯ ಗಮನಕ್ಕೆ ತಂದರು.

ವಿಧಾನ ಪರಿಷತ್​ ಸದಸ್ಯ ಎಂ.ಎಲ್​.ಅನಿಲ್​ ಕುಮಾರ್​ ಮಾತನಾಡಿ, ರಿಂಗ್​ ರಸ್ತೆ ವ್ಯಾಪ್ತಿಯ ರೇಡಿಯಸ್​ 60 ಕಿ.ಮೀ. ಇರಲಿದೆ. ಇನ್ನೂ ಹೆಚ್ಚು ವಿಸ್ತರಣೆ ಕಷ್ಟ. ಈ ಸಂಬಂಧ ಇನ್ನಷ್ಟು ಚರ್ಚೆ ಆಗಬೇಕಿದೆ ಎಂದು ತಿಳಿಸಿದರು.

ಕೋಮುಲ್​ ನಿರ್ದೇಶಕ ಚಂಜಿಮಲೆ ರಮೇಶ್​, ಗುತ್ತಿಗೆದಾರ ರತ್ನಕರ ರೆಡ್ಡಿ, ಸಿಂಡಿಕೇಟ್​ ಸದಸ್ಯ ಸೀಸಂದ್ರ ಗೋಪಾಲಗೌಡ, ಗ್ರಾಮಾಂತರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಿವೃತ್ತ ಇಂಜಿನಿಯರ್​ ಮಂಜುನಾಥ್​ ಇದ್ದರು.

* ದೂರದೃಷ್ಟಿಯಿಂದ ರಸ್ತೆ ನಿರ್ಮಿಸಿ

ನಗರವು ಭೌಗೋಳಿಕ ವ್ಯಾಪ್ತಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿಕೊಳ್ಳುತ್ತಿದೆ. ಜನಸಂಖ್ಯೆ, ವಾಹನಗಳ ದಟ್ಟಣೆ ಹೆಚ್ಚಾಗುತ್ತಿದ್ದು, ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ರಿಂಗ್​ ರೋಡ್​ ನಿರ್ಮಾಣ ಮಾಡಿದರೆ ಅನುಕೂಲ ಎಂದು ಸಂಸದ ಎಂ.ಮಲ್ಲೇಶ್​ ಬಾಬು ಸಲಹೆ ನೀಡಿದರು. ರಿಂಗ್​ ರೋಡ್​ ನಿರ್ಮಾಣ ಮಾಡಬೇಕು ಎಂಬುದು ಬಹುವರ್ಷಗಳ ಕನಸಾಗಿದೆ. ಇದಕ್ಕೆ ಕೇವಲ ಪ್ರಯತ್ನ ಆಗುತ್ತಿವೆ ಹೊರತು ಸಾಕಾರಗೊಳ್ಳುತ್ತಿಲ್ಲ. ಇನ್ನಾದರೂ ಅಭಿವೃದ್ಧಿ ಉದ್ದೇಶ ಇಟ್ಟುಕೊಂಡು ಕಾರ್ಯಗತಗೊಳಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗಿವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿಗೆ ಕೈಗಾರಿಕೆಗಳು ಜಿಲ್ಲೆಗೆ ಬರುವ ನಿರೀೆಯಿದೆ. ಚೆನ್ನೆ$&-ಬೆಂಗಳೂರು ಕಾರಿಡಾರ್​ ಉದ್ಘಾಟನೆಯಾದರೆ ಇನ್ನೂ ಹೆಚ್ಚು ವಾಹನ, ಜನರು ಬರುತ್ತಾರೆ. ವೇಮಗಲ್​ ಕೈಗಾರಿಕೆ ಪ್ರದೇಶದವರೆಗೆ ರಿಂಗ್​ರಸ್ತೆ ಸಂಪರ್ಕ ಇರಬೇಕು. ವಡಗೂರುವರೆಗೆ ವಿಸ್ತರಿಸಬೇಕು. ಮುಂದಿನ ವರ್ಷಗಳಲ್ಲಿ ಈ ಭಾಗದಲ್ಲಿ ಹೆಚ್ಚು ಅಭಿವೃದ್ಧಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

* ಭೂಸ್ವಾಧಿನಕ್ಕೆ ಹಣ ಕೊಡಿಸುವ ಜವಾಬ್ದಾರಿ

ರಿಂಗ್​ ರೋಡ್​ ಆಗಬೇಕು ಎಂಬುದು ಬಹುದಿನಗಳ ಕನಸು, ಮುಂದಿನ 25 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್​ ಸಲಹೆ ನೀಡಿದರು. ಡಿಪಿಆರ್​ ಸಿದ್ಧಪಡಿಸಲು ಅಧಿಕಾರಿಗಳು ಕ್ರಮವಹಿಸಬೇಕು, ಇದಕ್ಕೆ ಸರ್ಕಾರದ ಮೇಲೂ ಒತ್ತಡ ತಂದು ಸಹಕಾರ ಕೊಡಿಸಲಾಗುತ್ತದೆ. ನಾಲ್ಕು ಪಥ ರಸ್ತೆ ಮಾಡಬೇಕು. ಮತ್ತೆ ಪಥ ವಿಸ್ತರಣೆಗೆ ಜಾಗ ಇರಬೇಕು. ರಿಂಗ್​ ರಸ್ತೆ ನಿಮಾರ್ಣ ಸಂಬಂಧ ಮೊದಲು ಸ್ಯಾಟ್​ಲೈಟ್​ ಮ್ಯಾಪ್​ ಮಾಡಿ ಬಳಿಕ ಚರ್ಚಿಸೋಣ. ಆಮೇಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸೋಣ. ಚೆನ್ನೈ&-ಬೆಂಗಳೂರು ಕಾರಿಡಾರ್​, ರಾಷ್ಟ್ರೀಯ ಹೆದ್ದಾರಿ, ದೇವನಹಳ್ಳಿ ಹೆದ್ದಾರಿಗೆ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರದಿಂದ ಭೂಸ್ವಾಧಿನಕ್ಕೆ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಈ ಸಂಬಂಧ ರೈತರ ಜತೆ ಸಭೆ ನಡೆಸಿ ಅಡೆತಡೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.