ನ್ಯೂಸ್

ಮುಹ್ಯಿದ್ದೀನ್ ಯಾಸಿನ್​ ಮಲೇಷ್ಯಾದ ಹೊಸ ಪ್ರಧಾನಿ

ಕೌಲಾಲಂಪುರ್: ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹ್ಯಿದ್ದೀನ್ ಯಾಸಿನ್ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಆದರೆ ಮಾಜಿ ನಾಯಕ ಮಹತಿರ್ ಮಹಮದ್ ಇದನ್ನು ಕಾನೂನುಬಾಹಿರ ಎಂದಿದ್ದು, ಅಧಿಕಾರಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಹತಿರ್ ಸರ್ಕಾರದಲ್ಲಿ ಆಂತರಿಕ ಭದ್ರತೆಯ ಮಾಜಿ ಸಚಿವರಾಗಿದ್ದ ಮುಹ್ಯಿದ್ದೀನ್ ಪ್ರಧಾನಿಯಾಗುವುದರ ಮೂಲಕ ಒಂದು ವಾರದಿಂದ ದೇಶದಲ್ಲಿ ಉಂಟಾಗಿದ್ದ ರಾಜಕೀಯ ಅನಿಶ್ಚಿತತೆ ವಾತಾವರಣ ದೂರವಾಗಿದೆ. ಮಹತಿರ್ ನೇತೃತ್ವದ ಸುಧಾರಣವಾದಿ ‘ಪ್ಯಾಕ್ಟ್ ಆಫ್ ಹೋಪ್’ ಮೈತ್ರಿಕೂಟ 2018ರಲ್ಲಿ ಐತಿಹಾಸಿಕ ಜಯದೊಂದಿಗೆ ಅಧಿಕಾರಕ್ಕೆ ಬಂದಿತ್ತು.

ಆದರೆ, ಭವಿಷ್ಯದ ನಾಯಕನಾಗಿ ಹೊರಹೊಮ್ಮಲು ಕಾಯುತ್ತಿರುವ ಅನ್ವರ್ ಇಬ್ರಾಹಿಂರನ್ನು ಹೊರತಳ್ಳಲು ಯತ್ನಿಸಿದ ಹಿನ್ನೆಲೆಯಲ್ಲಿ ವಾರದ ಹಿಂದೆ ಅವರ ಸರ್ಕಾರ ಪತನಗೊಂಡು ರಾಜಕೀಯ ಬಿಕ್ಕಟ್ಟು ತಲೆದೋರಿತ್ತು. 94 ವರ್ಷದ ಮಹತಿರ್ ರಾಜೀನಾಮೆ ನೀಡಿದ್ದರಿಂದ ಪ್ರಧಾನಿ ಹುದ್ದೆಗೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಅಷ್ಟೇನೂ ಜನಪ್ರಿಯರಲ್ಲದ 72 ವರ್ಷದ ಮುಹ್ಯಿದ್ದೀನ್ ಮುಂದೆ ಮಹತಿರ್ ಸೋಲು ಕಾಣಬೇಕಾಯಿತು. -ಪಿಟಿಐ