ನ್ಯೂಸ್

ಮಾರಕ ಕಾಯಿಲೆ, ದುಬಾರಿ ವೆಚ್ಚದ ಹೊರೆಗೆ ನಲುಗುತ್ತಿದ್ದ ರೋಗಿಯನ್ನು ಕಾಪಾಡಿದ ಮಧುಸೂದನ ವೈದ್ಯಾಲಯ, ಸಂಕೀರ್ಣದ ಶಸ್ತ್ರಚಿಕಿತ್ಸೆ ಯಶಸ್ವಿ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋದನಾ ಸಂಸ್ಥೆಯ ವೈದ್ಯಾಲಯದಲ್ಲಿ ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದ ಕೃಷಿಕರಾದ  ಬಿಬೇಕಾನಂದ ಅವರು ಹೊಟ್ಟೆನೋವು ಮತ್ತು ಇಳಿಮುಖಗೊಂಡ ತೂಕದಿಂದ ದೇಹಾರೋಗ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ವೈದ್ಯಕೀಯ ತಪಾಸಣೆಯ ನಂತರ ಅವರಿಗೆ ಪ್ಯಾಂಕ್ರಿಯಾಸ್ ಕ್ಯಾನ್ಸರ್ ಎಂಬ ರೋಗವಿರುವುದು ಪತ್ತೆಯಾಯಿತು. ಉತ್ತಮ ವೈದ್ಯಕೀಯ ಚಿಕಿತ್ಸೆಯ ನಿರೀಕ್ಷೆಯಲ್ಲಿ ಅವರು ಬೆಂಗಳೂರಿಗೆ ಬಂದರು. ಆದರೆ ಶಸ್ತ್ರಚಿಕಿತ್ಸೆಗೆ ಸುಮಾರು 6 ಲಕ್ಷ ರೂಪಾಯಿಗಳ ಖರ್ಚು ತಗಲುತ್ತದೆ ಎಂಬ ಸುದ್ದಿ ಅವರನ್ನು ಆಘಾತದ ಕೂಪಕ್ಕೆ ತಳ್ಳಿ ಮತ್ತಷ್ಟು ಚಿಂತೆಗೆ ಈಡು ಮಾಡಿತು.

ಮುದ್ದೇನಹಳ್ಳಿಯಲ್ಲಿರುವ ಉಚಿತ ಆಸ್ಪತ್ರೆಯ ಬಗ್ಗೆ ತಿಳಿದು ಇಲ್ಲಿನ ವೈದ್ಯಾಲಯದ ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋ ಎಂಟರೋಲಾಜಿಸ್ಟ್ ಡಾ. ಭರತ್ ಕೋನನ್ ಅವರನ್ನು ಭೇಟಿಯಾಗಿದ್ದಾರೆ. ಇದಕ್ಕೆ ಸಿ ಟಿ ಸ್ಕ್ಯಾನ್ ಸಹಿತ ಎಲ್ಲಾ ತಪಾಸಣೆಗಳನ್ನು ಉಚಿತವಾಗಿ ಮಾಡಲಾಯಿತು. ಪರೀಕ್ಷಾ ವರದಿಯ ಆಧಾರದಲ್ಲಿ ಸುದೀರ್ಘ 9 ಗಂಟೆಗಳ ಲ್ಯಾಪ್ರೋಸ್ಕೋಪಿಕ್ ವಿಪಲ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ರೋಗಿಯು ಕ್ಯಾನ್ಸರ್ ನಂತಹ ಮಾರಕ ರೋಗವನ್ನು ತಮ್ಮ ದೇಹದಿಂದ ಕ್ಯಾನ್ಸಲ್ ಮಾಡಿಕೊಂಡಿದ್ದಾರೆ. 

ಲ್ಯಾಪ್ರೋಸ್ಕೋಪಿಕ್ ವಿಧಾನದಲ್ಲಿ ಈ ಶಸ್ತ್ರಚಿಕಿತ್ಸೆಯು ನಡೆದಿತ್ತು. ಕೇವಲ ಆರು ದಿನಗಳ ಅವಧಿಯಲ್ಲಿ ಗುಣಮುಖರಾಗಿ ವೈದ್ಯಾಲಯದಿಂದ ಬಿಡುಗಡೆ ಪಡೆದು ತವರಿಗೆ ಮರಳಿದ ಘಟನೆ  ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಸಂಸ್ಥೆಯಲ್ಲಿ ನಡೆದಿದೆ. 

ಇಂತಹ ಅಪರೂಪದ ಯಶಸ್ವಿ ಶಸ್ತ್ರಚಿಕಿತ್ಸೆ ಈ ಪ್ರದೇಶದಲ್ಲಿ ಹಾಗೂ ವೈದ್ಯಕೀಯ ಸಂಸ್ಥೆಯ ಇತಿಹಾಸದಲ್ಲಿ ಮೊದಲನೆಯದಾಗಿದ್ದು ಅದೊಂದು ಮೈಲುಗಲ್ಲು ಎಂದು ಪರಿಗಣಿಸಲಾಗಿದೆ.  

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿರುವ ಆಸ್ಪತ್ರೆಗೆ ಬರುವ ಇಂತಹ ರೋಗಿಗಳಿಗೆ ಮತ್ತಷ್ಟು ಚಿಕಿತ್ಸೆ ನೀಡುವ ಆಶಯ ವೈದ್ಯಾಲಯದ್ದಾಗಿದೆ. ವಾರದ ಪ್ರತಿ ಬುಧವಾರ ಮತ್ತು ಶನಿವಾರದಂದು ವಿಶೇಷ ತಪಾಸಣೆ ಮತ್ತು ಚಿಕಿತ್ಸೆ ನಡೆಸಲಾಗುವುದು ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಗ್ಯಾಸ್ಟ್ರೋ ಎಂಟರಾಲಾಜಿಸ್ಟ್ ಡಾ. ಭರತ್ ಕೋನನ್ ತಿಳಿಸಿದ್ದಾರೆ.

ಗಂಭೀರ ಸ್ವರೂಪದ ಕಾಯಿಲೆಗಳನ್ನು ಗುಣಪಡಿಸಲು ಅಪಾರ ಖರ್ಚು ವೆಚ್ಚಗಳನ್ನು ಭರಿಸ ಬೇಕಾಗುತ್ತದೆ. ಆದರೆ ಬಡವರಿಗೆ ಇದು ಕೈಗೆಟುಕದ ಹಾಗೆಯೇ ಊಹಿಸಲೂ ಅಸಾಧ್ಯವಾದ ವಿಚಾರವಾಗಿದೆ. ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಾಲಯದಲ್ಲಿ ತಪಾಸಣೆ, ವೈದ್ಯೋಪಚಾರಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಇದು ಈ ಪ್ರದೇಶಕ್ಕೆ ಬಹು ದೊಡ್ಡ ವರವಾಗಿದೆ.