ನ್ಯೂಸ್

ಮೂಡಾ ಹಗರಣದಿಂದ ನಿಲ್ಲದ ಚರ್ಚೆ; ಕಳೆಗುಂದಿರುವ ಅಧಿಕಾರದ ಶಕ್ತಿ ಕೇಂದ್ರ

Bengaluru - Political - Shivananda Tagadur

ಬೆಂಗಳೂರು:
ಮೂಡಾ ಪ್ರಕರಣದ ಹಿನ್ನೆಲೆಯಲ್ಲಿ ಅಧಿಕಾರದ ಶಕ್ತಿ ಸೌಧವಾದ ವಿಧಾನಸೌಧ ಮತ್ತು ವಿಕಾಸ ಸೌಧಕ್ಕೆ ಮಂಕು ಕವಿದಂತಾಗಿದೆ.
ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಕ್ರೀಯಾಶೀಲವಾಗಿ ಗಮನ ಸೆಳೆಯುತ್ತಿದ್ದ ವಿಧಾನಸೌಧದಲ್ಲಿ ವಾಲ್ಮಿಕಿ ನಿಗಮ ಹಗರಣ ಮತ್ತು ಮೂಡಾ ಪ್ರಕರಣವೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ಈ ಪ್ರಕರಣ ಮತ್ತು ಹಗರಣ ಪರ ಮತ್ತು ವಿರುದ್ದವಾಗಿ ವಾದ ವಿವಾದ, ಆರೋಪ ಮತ್ತು ಪ್ರತ್ಯೋರೋಗಳು ನಿತ್ಯ ನಡೆಯುತ್ತಲೇ ಇವೆ.
ಮೂಡಾ ಪ್ರಕರಣದಲ್ಲಿ ಸಿಎಂ ಪತ್ನಿ ಪಾರ್ವತಿ ಅವರು ಎಲ್ಲಾ ಸೈಟ್‌ಗಳನ್ನು ವಾಪಸ್ಸು ಮಾಡಿದ ಬಳಿಕ ಚರ್ಚೆ ಮತ್ತೊಂದು ದಿಕ್ಕಿಗೆ ತಿರುಗಿದೆ. ಇಷ್ಟು ದಿನ ಒಂದು ಕಡೆಯಲ್ಲಿ ನಡೆಯುತ್ತಿದ್ದ ಚರ್ಚೆಯ ವೇಗಕ್ಕೆ ಬ್ರೇಕ್ ಬಿದ್ದಿದೆ.
ಇಷ್ಟು ದಿನ ಮೂಡಾ ಹಂಚಿಕೆ ಮಾಡಿದ್ದ ಸೈಟ್‌ಗಳ ಬಗ್ಗೆ ಮುಖ್ಯಮಂತ್ರಿಗಳ ಆಪ್ತ ವಲಯದ ಸಚಿವರು ಸಮರ್ಥಿಸಿಕೊಳ್ಳುತ್ತಿದ್ದರು. ಈಗ ಸೈಟ್ ವಾಪಸ್ಸು ನೀಡಿರುವುದು ಸರಿಯಾದ ಕ್ರಮ ಎಂದು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾರೆ.
ಶಕ್ತಿ ಸೌಧದಲ್ಲಿ ಸಚಿವರುಗಳು ಕ್ರೀಯಾಶೀಲವಾಗಿ ಓಡಾಡಿಕೊಂಡು ಕೆಲಸ ಮಾಡಬೇಕಾದ ವಾತಾವರಣವಂತೂ ಸದ್ಯಕ್ಕಿಲ್ಲ. ಎಲ್ಲರ ಚಿತ್ತ ಮೂಡಾ ಪ್ರಕರಣದ ಸುತ್ತಮುತ್ತಲೇ ಸುತ್ತಿಕೊಂಡಿದೆ. ದಸರಾ ಕಳೆದ ಮೇಲೆ ಶಕ್ತಿ ಸೌಧ ಕಳೆಗಟ್ಟಲಿದೆ ಎನ್ನುವುದು ಶಾಸಕರ ನಿರೀಕ್ಷೆ.