ನ್ಯೂಸ್

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಮತ್ತೆ ನಿರಾಳ; ಸೆ.12ಕ್ಕೆ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಬೆಂಗಳೂರು: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್​​ಗೆ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ. ಇಂದು (ಸೋಮವಾರ) ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದರು.

ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿದರು. ಸೆ.12ರಂದು ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಾದ ಮಂಡನೆ ಮಾಡಲಿದ್ದಾರೆ. ಅಲ್ಲಿಯವರೆಗೆ ಸಿಎಂಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

17A ಅಡಿ ಪ್ರಾಸಿಕ್ಯೂಷನ್‌ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು ಎಂದು ಲಲಿತಾ ಕುಮಾರಿ ಪ್ರಕರಣವನ್ನು ಉಲ್ಲೇಖಿಸಿದ್ದರು.

ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವಿದೆ ಎಂದಿದೆ. ಆದರೆ 17ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕಿಂದಿಲ್ಲ. ವಿಚಾರಣೆ, ತನಿಖೆಗೂ ಮುನ್ನ 17ಎ ಅನುಮತಿ ಬೇಕಲ್ಲವೇ? ಎಂದು ಅಡ್ವೊಕೆಟ್ ಜನರಲ್‌ಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನಿಸಿದರು. ಯಾವ ಪ್ರಕರಣದಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು ಎಂದು ಎಜಿ ವಾದಿಸಿದರು.

ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್ ವಾದ ಮಾಡಿ, ಕೆಸರೆ ಗ್ರಾಮ ಇದೆ, ಸರ್ವೇ ನಂಬರ್ 464 ಇದೆ. ಇದ್ಯಾವುದನ್ನೂ ನುಂಗಲಾಗಿಲ್ಲ. ಇದಕ್ಕೆ ದಾಖಲೆಗಳನ್ನು ನಾನು ತೋರಿಸುತ್ತೇನೆ ಎಂದರು. ಇನ್ನು ದೂರದಾರ ಸ್ನೇಹಮಯಿ ಕೃಷ್ಣ ಪರವಾಗಿ ವಕೀಲೆ ಲಕ್ಷ್ಮೀ ಐಯ್ಯಂಗಾರ್ ವಾದ ಮಾಡಿದರೆ, ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಅಭಿಶೇಖ್ ಮನುಸಿಂಘ್ವಿ ಹಾಗೂ ಪ್ರೊ, ರವಿವರ್ಮಕುಮಾರ್ ಸೆಪ್ಟಂಬರ್ 12 ರಂದು ವಾದ ಮಂಡಿಸಲಿದ್ದಾರೆ. ಈ ಮೂಲಕ ಸೆಪ್ಟಂಬರ್ 12 ರವರೆಗೆ ಸಿದ್ದರಾಮಯ್ಯಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.