ನ್ಯೂಸ್

‘ಗುಳಿಗೆ ಸಿದ್ದ ಒಳಗೊಳಗೇ ಮೇಯ್ದ’ ಸಿಎಂಗೆ ಟಾಂಗ್ ಕೊಟ್ಟ ಜೆಡಿಎಸ್

ಬೆಂಗಳೂರು: ಮುಡಾ ಹಗರಣದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಟಾಕ್ ಆ್ ವಾರ್ ಜೋರಾಗಿಯೇ ನಡೆಯುತ್ತಿದೆ.

ಪರಸ್ಪರ ಟೀಕೆ-ಟಿಪ್ಪಣಿ, ವೈಯಕ್ತಿಕ ಚಾರಿತ್ರ್ಯ ವಧೆಯ ಮಟ್ಟವನ್ನೂ ಮುಟ್ಟಿದೆ. ಈ ನುಡವೆ ಮುಡಾ ಹಗರಣ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥನೆಯನ್ನು ಜೆಡಿಎಸ್ ಗೇಲಿ ಮಾಡಿದೆ. ಗುಳಿಗೆ ಸಿದ್ದ ಒಳಗೆ ಮೇಯ್ದ ಎಂಬ ಮಾತನ್ನು ಉಲ್ಲೇಖಿಸಿ ಟಾಂಗ್ ಕೊಟ್ಟಿದೆ.

ನನಗೆ ಒಂದು ನಿವೇಶನವೂ ಇಲ್ಲ. ಯಾವುದೇ ಲೆಟರ್ ಬರೆದಿಲ್ಲ ಎಂದು ಸುಳ್ಳು ಹೇಳುವ ಮುಖ್ಯಮಂತ್ರಿ ಸಿದದರಾಮಯ್ಯ ಅವರೇ, ಸಮಾಜವಾದಿ ಮುಖವಾಡ ತೊಟ್ಟು ನೀವು ಮಾಡಿರುವ ಅಕ್ರಮಗಳಿಗೆ ಈ ಲೆಟರ್ ಸಾಕ್ಷಿ ಎಂದು ಸಿಎಂ ಬರೆದಿರುವ ಪತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದೆ.

ಬದಲಿ ನಿವೇಶನ ಕೋರಿ ನೀವೇ ಸ್ವತಃ ಬರೆದಿರುವ ಪತ್ರ, ನಿಮ್ಮದೇ ಸಹಿ ಇಷ್ಟು ಸಾಕಲ್ಲವೇ ? ಇದು ನಿಮಗೆ ಕಪ್ಪು ಚುಕ್ಕೆ ಅಲ್ಲವೇ ? ಎಂದು ಕೆಣಕಿದೆ.

ದಿನ ಪತ್ರಿಕೆಗಳು, ಮಾಧ್ಯಮಗಳ ಸಂದರ್ಶನಗಳಲ್ಲಿ ನಾನು ಶುದ್ಧ ಹಸ್ತ, ಸಮಾಜವಾದಿ ಎಂದು ಸತ್ಯ ಹರಿಶ್ಚಂದ್ರನಂತೆ ಮಾತಾಡುವ ನಿಮ್ಮ ಅಸಲೀ ಬಂಡವಾಳ ಈಗ ಬಯಲಾಗಿದೆ.

ದಲಿತರ ಜಮೀನು ಕಬಳಿಸಿರುವ ನೀವು ಪರಿಶಿಷ್ಟ ಸಮುದಾಯಕ್ಕೆ ವಂಚಿಸಿದ್ದೀರಿ, ಸುಳ್ಳುಗಳ ಮೇಲೆ ಸುಳ್ಳಗಳನ್ನು ಹೇಳುತ್ತ ನಾಡಿನ ಜನರಿಗೂ ನಂಬಿಕೆ ದ್ರೋಹ ಎಸಗಿದ್ದೀರಿ. ಇದೇನಾ ನಿಮ್ಮ ಶುದ್ಧವಾದ ರಾಜಕೀಯ ಜೀವನ? ಸಿದ್ದರಾಮಯ್ಯ ಅವರೇ ನಿಮಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವ ಯಾವ ನೈತಿಕತೆಯೂ ಉಳಿದಿಲ್ಲ. ಮೊದಲು ರಾಜೀನಾಮೆ ಕೊಟ್ಟು ನಿರ್ಗಮಿಸಿ ಎಂದು ಜೆಡಿಎಸ್ ಟೀಕೆಯ ಸುರಿಮಳೆ ಗರೆದಿದೆ.