ನ್ಯೂಸ್

ಮುಡಾ ಕಳಚಿತು ಮುಖ್ಯಮಂತ್ರಿ ಮುಖವಾಡ: ಸಿದ್ದರಾಮಯ್ಯ ವಿರುದ್ಧ ಬಿ.ವೈ.ವಿಜಯೇಂದ್ರ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಭ್ರಷ್ಟಾಚಾರಮುಕ್ತ, ಉತ್ತಮ ಹಾಗೂ ಸಾಮಾಜಿಕ ನ್ಯಾಯ ಪರ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ನಿಜಬಣ್ಣ ಬಯಲಾಗಿದೆ. ಮುಡಾ ಅಕ್ರಮದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖವಾಡ ಕಳಚಿಬಿದ್ದಿದೆ ಎಂದು ರಾಜ್ಯ ಬಿಜೆಪಿ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನಗಳ ಹಂಚಿಕೆ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಗೃಹಲಕ್ಷ್ಮಿ ಯೋಜನೆಯಡಿ ಬಡ ಮಹಿಳೆಯರಿಗೆ ಎರಡು ಸಾವಿರ ರೂ. ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಸಿಎಂ ಪತ್ನಿಗೆ ಬಹುಕೋಟಿ ರೂ. ಮೌಲ್ಯದ ನಿವೇಶನಗಳು ಹಂಚಿಕೆಯಾಗಿವೆ. ಕಾನೂನುಬಾಹಿರವಾದ ಹಂಚಿಕೆಗೆ ಸಿಎಂ ಅಧಿಕಾರ, ಪ್ರಭಾವ ಬಳಸಿದ್ದಾರೆ ಎಂದು ಆರೋಪಿಸಿದರು.

ಮೈಸೂರಿನಲ್ಲಿ ನಾಳೆ ಪ್ರತಿಭಟನೆ: ಮುಡಾ ಅಕ್ರಮದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಮೈಸೂರಿನಲ್ಲಿ 12ರಂದು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ತಿಳಿಸಿದರು. ಸಿದ್ದರಾಮಯ್ಯ ಅವರು ಪತ್ನಿಗೆ ದಾನ ರೂಪದಲ್ಲಿ ಬಂದ 3.16 ಎಕರೆ ಜಮೀನಿನ ಬಗ್ಗೆ 2013ರ ವಿಧಾನಸಭೆ ಚುನಾವಣೆಯ ಅಫಿಡವಿಟ್​ನಲ್ಲಿ ಉಲ್ಲೇಖಿಸಿಲ್ಲ. ಇದು, ಚುನಾವಣಾ ನೀತಿ ಸಂಹಿತೆ ಹಾಗೂ ಜನತಾ ಪ್ರಾತಿನಿಧ್ಯ ಕಾಯ್ದೆ ಉಲ್ಲಂಘನೆಯಾಗಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ಕೊಡಲು ನಿರ್ಧರಿಸಿದ್ದೇವೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಅಕ್ರಮಕ್ಕೆ ಕೈಗನ್ನಡಿ

  1. ಮುಡಾದಿಂದ 199ರಿಂದ ಭೂಸ್ವಾಧೀನ ಶುರುವಾಗಿದೆ. 2004ರಲ್ಲಿ ಸಿಎಂ ಪತ್ನಿ ಪಾರ್ವತಮ್ಮ ಅವರ ಅಣ್ಣ ಖರೀದಿಸಿದಾಗ ಪಹಣಿ ಪ್ರತಿ(ಆರ್​ಟಿಸಿ)ಯಲ್ಲಿ ಮುಡಾ ಸ್ವಾಧೀನತೆ, ಕೃಷಿಯೇತರ ಎಂದು ದಾಖಲಾಗಿದೆ. 2009-10ರಲ್ಲಿ ಗಿಫ್ಟ್ ಡೀಡ್ ಆದಾಗಲೂ ಮುಡಾ ಹೆಸರಿನಲ್ಲೇ ಮಾಲೀಕತ್ವ ಇದೆ. ಕೃಷಿಯೇತರ ಜಮೀನನ್ನು ಕೃಷಿ ಜಮೀನು ಎಂದಿರುವುದು, ಮುಡಾ ಮಾಲೀಕತ್ವದ ಜಮೀನು ಪಾರ್ವತಮ್ಮ ಅವರ ಅಣ್ಣ ಖರೀದಿಸಿದ್ದು ಹೇಗೆ ?

2. 2022, ಜನವರಿ 12ರ ಕ್ರಯಪತ್ರದ ಪ್ರಕಾರ ಮುಡಾ ಪ್ರೋತ್ಸಾಹ ದಾಯಕ ಯೋಜನೆಯಡಿ ನಿಯಮಗಳು 1991ರ ಮೇರೆಗೆ ಎಂದು ಉಲ್ಲೇಖಿಸಿ ಸಿಎಂ ಪತ್ನಿಗೆ 14 ನಿವೇಶನಗಳನ್ನು ಹಂಚಿಕೆ ಮಾಡಿದೆೆ. ಈ ನಿಯಮದಂತೆ ಒಂದು ಎಕರೆಗೆ ಮೀರಿದ ಜಮೀನಿಗೆ 40/60 ಅಡಿ, 3 ರಿಂದ ನಾಲ್ಕು ಎಕರೆ ಒಳಗಿದ್ದರೆ 40/60 ಅಡಿ ಅಳತೆಯ ಎರಡು ನಿವೇಶನ (4,800 ಚದರಡಿ) ಮಾತ್ರ ಕೊಡಬೇಕಾಗಿತ್ತು. 3. ಮೈಸೂರಿನ ಕೆಸರೇ ಗ್ರಾಮದ 3.16 ಎಕರೆಗೆ ಬದಲಾಗಿ ಸಿಎಂ ಪತ್ನಿಗೆ 14 ನಿವೇಶನ ಮಂಜೂರಾಗಿವೆ. ಆದರೆ 62 ಕೋಟಿ ರೂ. ಬರಬೇಕಾಗಿದ್ದು, 18 ಕೋಟಿ ರೂ.ಗಳ ನಿವೇಶನ ಪಡೆದಿರುವುದಾಗಿ ಸಿಎಂ ಹೇಳುತ್ತಾರೆ. ವಾಸ್ತವದಲ್ಲಿ ಈ ನಿವೇಶನಗಳ ಮಾರ್ಗಸೂಚಿ ಮೌಲ್ಯ ಚದರಡಿಗೆ ಮೂರು ಸಾವಿರ ರೂ., ಮಾರುಕಟ್ಟೆ ಮೌಲ್ಯ ಒಂಬತ್ತು ಸಾವಿರ ರೂ.ಗಳಾಗಿವೆ. ? ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮಗಳಾಗಿವೆ ಎಂದು ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ವರದಿ ಕೊಟ್ಟರೂ ಸರ್ಕಾರ ಕ್ರಮವಹಿಸಿಲ್ಲ. ಹಗರಣ ಹೊರಬಿದ್ದ ಬಳಿಕ ಅವರನ್ನು ವರ್ಗಾವಣೆ ಮಾಡಿದೆ. ನಿವೇಶನ ಹಂಚಿಕೆ ವಿಷಯದಲ್ಲಿ ಲೋಪದೋಷಗಳತ್ತ ಮುಡಾ ತಾಂತ್ರಿಕ ಸಮಿತಿ ಬೆಳಕು ಚೆಲ್ಲಿದೆ. ? ನಿವೇಶನಗಳ ಹಂಚಿಕೆ ಅಕ್ರಮದ ಕುರಿತು ಜಿಲ್ಲಾಧಿಕಾರಿ 15-6-2024ರಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ನಂತರವೂ ಪ್ರಭಾವಿ ವ್ಯಕ್ತಿಯೊಬ್ಬರಿಗೆ 42 ನಿವೇಶನ ಮುಡಾ ಹಂಚಿಕೆ ಮಾಡಿದೆ.

ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆಯಾಗಿದೆ. ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ದೆಹಲಿಯಲ್ಲಿ ಆಯೋಗಕ್ಕೆ ದೂರು ಸಲ್ಲಿಸಿದ್ದು, ಚುನಾವಣಾ ಅಫಿಡವಿಟ್​ನಲ್ಲಿ ತಮ್ಮ ಪತ್ನಿ ಹೆಸರಲ್ಲಿರುವ 3.16 ಎಕರೆ ಜಮೀನು ಬಗ್ಗೆ ಮಾಹಿತಿ ಮುಚ್ಚಿಟ್ಟಿರುವುದಾಗಿ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಗಮನದಲ್ಲಿದ್ದೂ ಕೂಡ ಪತ್ನಿ ಹೆಸರಿನಲ್ಲಿರುವ ಕೃಷಿ ಜಮೀನಿನ ವಿವರಗಳನ್ನು ಮುಚ್ಚಿಡಲಾಗಿದೆ. ಉದ್ದೇಶ ಪೂರ್ವಕವಾಗಿ ಕಲಂ ಖಾಲಿ ಬಿಟ್ಟಿದ್ದಾರೆ. 2013ರ ಚುನಾವಣಾ ಅಫಿಡವಿಟ್​ನಲ್ಲಿ ದಾಖಲೆಗಳು ಸಲ್ಲಿಕೆ ಆಗಿಲ್ಲ. ಹೀಗಾಗಿ ಭಾರತೀಯ ನ್ಯಾಯ ಸಂಹಿತೆಯ ಜನತಾ ಪ್ರಾತಿನಿಧ್ಯ ಕಾಯ್ದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಸಚಿವ ಬೈರತಿ ಸುರೇಶ್ ಮಿಂಚಿನ ಸಂಚಾರ: ಮುಡಾ ಹಗರಣ ಬಯಲಾದ ದಿನವೇ ಸಚಿವ ಬೈರತಿ ಸುರೇಶ್, ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಿ, ಆಯುಕ್ತರು ಸೇರಿ ಅಲ್ಲಿದ್ದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವ ಬದಲು ವರ್ಗಾವಣೆ ಮಾಡುತ್ತಾರೆ. ಸಂಬಂಧಿಸಿದ ಕಡತಗಳನ್ನು ತೆಗೆದುಕೊಂಡು ರಾತೋರಾತ್ರಿ ಬೆಂಗಳೂರಿಗೆ ವಾಪಸಾಗುತ್ತಾರೆ. ಇಷ್ಟು ಸಾಲದೆಂಬಂತೆ ಇನ್ನಷ್ಟು ಕಡತಗಳನ್ನು ಬೆಂಗಳೂರಿಗೆ ತರಿಸಿಕೊಳ್ಳುತ್ತಲೇ ಇದ್ದಾರೆ. ಲೋಪ ಎಸಗಿದ ಅಧಿಕಾರಿಗಳ ರಕ್ಷಣೆ ಹಾಗೂ ಕಡತಗಳನ್ನು ಮುಚ್ಚಿ ಹಾಕುವುದೇ ಮಿಂಚಿನ ಸಂಚಾರದ ಹುನ್ನಾರವಿದ್ದಂತಿದೆ ಎಂದು ಬಿ.ವೈ.ವಿಜಯೇಂದ್ರ ಅನುಮಾನಿಸಿದರು.

ತಪ್ಪಿತಸ್ಥರ ವಿರುದ್ಧ ಕ್ರಮ ನಿಶ್ಚಿತ

ಮೈಸೂರು: ಮುಡಾದಲ್ಲಿ 50:50 ಅನುಪಾತ ದಲ್ಲಿ ನಿವೇಶನ ಹಂಚಿಕೆ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ ನಂತರವೂ ನಿವೇಶನಗಳು ಹಂಚಿಕೆಯಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ. ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ನೂರಕ್ಕೆ ನೂರರಷ್ಟು ಕ್ರಮ ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ಮಾಧ್ಯಮ ಗಳೊಂದಿಗೆ ಮಾತನಾಡಿ, ಹಗರಣದ ಕುರಿತು ಇಬ್ಬರು ಐಎಎಸ್ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಈ ವಿಚಾರವಾಗಿ ಬಿಜೆಪಿಯವರು ರಾಜಕೀಯವಾಗಿ ಟೀಕೆ ಮಾಡುತ್ತಿದ್ದಾರೆ. ಅವರು ಸದನದಲ್ಲಿ ಈ ವಿಚಾರ ಎತ್ತಿದರೆ ಉತ್ತರ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾನೂನು ಪ್ರಕಾರವೇ ಬದಲಿ ನಿವೇಶನ: ನನ್ನ ಪತ್ನಿಗೆ ಕಾನೂನು ಪ್ರಕಾರವೇ ಬದಲಿ ನಿವೇಶನ ಹಂಚಿಕೆಯಾಗಿದೆ. ನಮ್ಮ ಜಮೀನನ್ನು ಮುಡಾ ಅನಧಿಕೃತವಾಗಿ ವಶಕ್ಕೆ ಪಡೆದುಕೊಂಡು ಬಡಾವಣೆ ನಿರ್ವಿುಸಿತ್ತು. ಮುಡಾ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ನಾವು ವಿಜಯನಗರದಲ್ಲಿ ನಿವೇಶನ ನೀಡಿ ಎಂದು ಕೇಳಿರಲಿಲ್ಲ. ಈ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು. ಮುಡಾದಲ್ಲಿ ಜನಪ್ರತಿನಿಧಿ ಗಳನ್ನು ಒಳಗೊಂಡ ಸಮಿತಿಯನ್ನು ರದ್ದುಪಡಿಸುವ ಕುರಿತು ಬಹಳ ಹಿಂದೆಯೇ ಚರ್ಚೆ ನಡೆದಿದೆ. ಈ ಬಗ್ಗೆ ಮತ್ತೆ ಚರ್ಚೆ ನಡೆಯುತ್ತಿದ್ದು, ಅಭಿಪ್ರಾಯ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವರ್ಗಾವಣೆ ಬೆದರಿಕೆಯೊಡ್ಡಿ ಕಡತ ವಿಲೇವಾರಿ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣದಲ್ಲಿ ಮುಡಾ ಆಯುಕ್ತ ದಿನೇಶ್​ಕುಮಾರ್ ಸೇರಿ ಮೂವರು ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಶಿಕ್ಷೆಗೆ ಗುರಿ ಮಾಡಿದ್ದು, ಇದೀಗ ತನಿಖೆ ಚುರುಕುಗೊಳ್ಳುತ್ತಿದ್ದಂತೆಯೇ ಕೆಳ ಹಂತದ ಅಧಿಕಾರಿಗಳಿಗೂ ನಡುಕ ಪ್ರಾರಂಭವಾಗಿದೆ.

ಬದಲಿ ನಿವೇಶನ ಹಂಚಿಕೆಯ ಪ್ರತಿಯೊಂದು ಕಡತಗಳು ಭೂ ಸ್ವಾಧೀನ ಶಾಖೆಯಿಂದ ಪ್ರಾರಂಭವಾಗಿ ಕಂದಾಯ ಶಾಖೆ, ತಾಂತ್ರಿಕ ಶಾಖೆ, ಆಯುಕ್ತರು ಮೂಲಕ ವಿಲೇವಾರಿಯಾಗಿರುತ್ತದೆ. ಹೀಗಾಗಿ ಕಡತ ವಿಲೇವಾರಿಯಲ್ಲಿ ನೇರವಾಗಿ ಭಾಗಿಯಾಗಿರುವ ಅಧಿಕಾರಿಗಳಿಗೆ ನಡುಕ ಪ್ರಾರಂಭವಾಗಿದೆ. ಆಯುಕ್ತರು ತಮ್ಮ ಕೆಳ ಹಂತದ ಅಧಿಕಾರಿಗಳ ಮೇಲೆ ಒತ್ತಡ ಹೇರುವ ಮೂಲಕ ಕಡತ ವಿಲೇವಾರಿ ಮಾಡಿಸಿಕೊಂಡಿದ್ದಾರೆ ಎಂಬ ಮಾತುಗಳು ಇದೀಗ ಮುಡಾ ಆವರಣದಲ್ಲಿ ಕೇಳಿ ಬರುತ್ತಿದೆ. ಬದಲಿ ನಿವೇಶನದ ಕಡತಗಳು ಒಂದು ಶಾಖೆಯಿಂದ ಮತ್ತೊಂದು ಶಾಖೆಗೆ ಹೋಗಲು ವಿಳಂಬವಾದರೆ ಹಾಗೂ ಕೆಳ ಹಂತದ ಅಧಿಕಾರಿಗಳು ನಿರಾಕರಿಸಿದರೆ ಅವರನ್ನು ವರ್ಗಾವಣೆ ಮಾಡುವ ಬೆದರಿಕೆಯೊಡ್ಡುವ ಮೂಲಕ ಆಯುಕ್ತರು ಕಡತ ವಿಲೇವಾರಿ ಮಾಡಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದ್ದು, ತನಿಖೆಯಿಂದ ಸತ್ಯಾಂಶ ಬಯಲಿಗೆ ಬರಬೇಕಾಗಿದೆ. ಹಗರಣದ ಕುರಿತು ತನಿಖೆ ನಡೆಸುತ್ತಿರುವ ತನಿಖಾ ತಂಡದ ಪ್ರತಿಯೊಂದು ಕಡತಗಳನ್ನು ಪರಿಶೀಲನೆ ಮಾಡುತ್ತಿದ್ದು, ಕಡತವನ್ನು ಯಾರು ವಿಲೇವಾರಿ ಮಾಡಿದ್ದಾರೆ ಎಂದು ಕೂಲಂಕಷವಾಗಿ ಪರಿಶೀಲನೆ ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ಮುಡಾದಲ್ಲಿರುವ ಬಹುಪಾಲು ಅಧಿಕಾರಿಗಳನ್ನು ಆತಂಕಕ್ಕೆ ದೂಡಿದೆ. ಪ್ರಕರಣದ ತನಿಖೆ ಸೀಮಿತಗೊಳಿಸದೆ ಸಮಗ್ರವಾಗಿ ತನಿಖೆ ನಡೆಸುವ ಸಾಧ್ಯತೆ ಇದೆ.