ನ್ಯೂಸ್

12ಕ್ಕೆ ಮುಡಾ ಕ್ಲೈಮ್ಯಾಕ್ಸ್?: ಗೌರಿ-ಗಣೇಶ ಹಬ್ಬದವರೆಗೆ ಸಿಎಂ ಸಿದ್ದರಾಮಯ್ಯಗೆ ನಿರಾಳ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಸೆ.9ಕ್ಕೆ ಮುಂದೂಡಿದೆ. ಆತುರದ ಕ್ರಮ ಕೈಗೊಳ್ಳದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸೂಚಿಸಿದ್ದ ಮಧ್ಯಂತರ ಆದೇಶ ಕೂಡ ವಿಸ್ತರಣೆ ಆಗಿರುವುದರಿಂದ ಮುಖ್ಯಮಂತ್ರಿಗೆ ಗೌರಿ-ಗಣೇಶ ಹಬ್ಬದವರೆಗೂ ನಿರಾಳತೆ ಸಿಕ್ಕಂತಾಗಿದೆ. ಸೆ.12ರಂದು ವಾದ ಮಂಡನೆ ಪೂರ್ಣಗೊಳಿಸುವಂತೆ ನ್ಯಾಯಪೀಠ ಹೇಳಿರುವುದರಿಂದ ಅಂದೇ ತೀರ್ಪು ಹೊರಬೀಳುವ ಸಾಧ್ಯತೆ ಇದೆ.

ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ಸೋಮವಾರ ಮಧ್ಯಾಹ್ನ ವಿಚಾರಣೆ ಮುಂದುವರಿಯಿತು. ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಎರಡು ಗಂಟೆ ವಾದ ಮಂಡಿಸಿದರು. ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ತಮ್ಮ ವಾದ ಮಂಡನೆಗೆ ಸೋಮವಾರದವರೆಗೆ ಕಾಲಾವಕಾಶ ನೀಡಬೇಕೆಂದು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದರು. ಇದೇ ವೇಳೆ ವಿಡಿಯೋ ಕಾನ್ಪೆರನ್ಸ್ ಮೂಲಕ ಹಾಜರಿದ್ದ ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯ ಸರ್ಕಾರ ವಾದ ಮಂಡಿಸಿದ ಬಳಿಕ ನಮಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ. ಸೆ.9 ರಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ರಾಜ್ಯ ಸರ್ಕಾರದ ಪರ ವಾದ ಮಂಡಿಸಲಿದ್ದಾರೆ. ಇದಕ್ಕೆ ಪ್ರತಿಯಾಗಿ ಸೆ.12ರಂದು ಸಿದ್ದರಾಮಯ್ಯ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.

ಅರ್ಜಿದಾರರು ಹಾಗೂ ಎಲ್ಲ ಪ್ರತಿವಾದಿಗಳ ಪರ ವಕೀಲರ ವಾದ ಮಂಡನೆ ಪೂರ್ಣಗೊಳಲಿದೆ ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಹೇಳಿದರು. ಹೀಗಾಗಿ ಸೆ.12ರಂದೇ ಪ್ರಕರಣ ಅಂತಿಮ ಹಂತಕ್ಕೆ ತಲುಪುವ ನಿರೀಕ್ಷೆ ಇದೆ.

ಪ್ರಭಾವದ ಲಾಭ ಅಪರಾಧ!: ಭ್ರಷ್ಟಾಚಾರ ತಡೆ ಕಾಯ್ದೆ ಉಲ್ಲೇಖಿಸಿ, ಕಾನೂನುಬಾಹಿರವಾಗಿಲ್ಲದಿದ್ದರೂ ಪ್ರಭಾವ ಬಳಸಿ ಲಾಭ ಪಡೆದರೆ ಅದು ಅಪರಾಧವೇ. ಅನುಕೂಲ ಪಡೆಯಲು ಅಧಿಕಾರಿ ಮೇಲೆ ಪ್ರಭಾವ ಬಳಸಿದರೂ ಅಪರಾಧ. ಪಡೆಯುವ ಅನುಕೂಲ ಕಾನೂನು ಬಾಹಿರವಾಗಿಲ್ಲದಿದ್ದರೂ ಅದು ಅಪರಾಧ. ವೈಯಕ್ತಿಕ ಪ್ರಭಾವ ಬಳಸಿದರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 7 (ಸಿ) ಅನ್ವಯ ಅಪರಾಧ. ಒಬ್ಬ ಸಚಿವ ಇಲಾಖೆಯಲ್ಲದೇ ಬೇರೆಡೆ ಪ್ರಭಾವ ಬೀರಿದರೂ ಅಪರಾಧ. ಸಾರ್ವಜನಿಕ ಆಡಳಿತದಲ್ಲಿ ಪಾವಿತ್ರ್ಯತೆ ತರಲು ಸೆಕ್ಷನ್ 7 (ಸಿ) ಜಾರಿಗೆ ತರಲಾಗಿದೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಪರ ಹಿರಿಯ ವಕೀಲ ಕೆ.ಜಿ.ರಾಘವನ್ ಬಲವಾಗಿ ವಾದಿಸಿದರು.

ಜಡ್ಜ್ ಎತ್ತಿದ ಪ್ರಶ್ನೆಗಳು..

* ವಿಚಾರಣೆ ವೇಳೆ ನ್ಯಾಯಮೂರ್ತಿಗಳು ಹಲವು ಪ್ರಶ್ನೆ ಮುಂದಿಟ್ಟರು

* ಈ ಕೇಸಿಗೂ ಮುಡಾ ತನಿಖಾ ಆಯೋಗಕ್ಕೂ ಸಂಬಂಧವಿದೆಯೇ?

*ಮುಡಾದ ಸಾಮಾನ್ಯ ಆಡಳಿತಾತ್ಮಕ ಕ್ರಮ ತನಿಖೆಗೆ ಆಯೋಗ ರಚನೆ

* ಗೌರ್ನರ್ ಸಮ್ಮತಿ ಬಗ್ಗೆ ಸಾಂವಿಧಾನಿಕ ನ್ಯಾಯಾಲಯ ತೀರ್ವನಿಸಬೇಕು

* ಹೈಕೋರ್ಟ್​ಗೆ ರಾಜ್ಯಪಾಲರ ಆದೇಶ ಬಗ್ಗೆ ತೀರ್ಪು ನೀಡುವ ಅಧಿಕಾರವಿದೆ

* ಆಯೋಗದ ರಚನೆ ಬಗ್ಗೆ ನಿಮಗೆ ಏನಾದರೂ ಸಮಾಧಾನವಿದೆ ತಾನೆ?

* ಆಯೋಗದ ವರದಿ ಬರುವವರೆಗೆ ಈ ತನಿಖೆಗಳ ಅಗತ್ಯವಿದೆಯೇ?

* ನಾವು ಆಯೋಗದ ವರದಿ ಜಾರಿಯಾಗುವಂತೆ ಆದೇಶ ಮಾಡಿದರೆ?

* ನಿಮಗೆ ಇದು ಅವಸರದಲ್ಲಿ ಮೂಡಿದ ಸಂದೇಹವಾಗಿದೆಯೇ?

* 60/40ರ ಅನುಪಾತದಲ್ಲಿ ಅವರು ಅರ್ಜಿ ಸಲ್ಲಿಸಬಹುದಾಗಿತ್ತೇ?

* 50:50ರಲ್ಲಿ 14 ನಿವೇಶನ ಹಂಚಿಕೆ ನಂತರ 50:50 ಹಂಚಿಕೆ ಸ್ಥಗಿತವೇ?

* ಮುಡಾದಲ್ಲಿನ ಈ ನಿವೇಶನ ಹಂಚಿಕೆ ಕುರಿತ ವಾದ ಎಷ್ಟು ಸತ್ಯ?