ನ್ಯೂಸ್

ಮುಡಾ ಪ್ರಕರಣ; ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಯಾವಾಗ?: ಬಿಜೆಪಿ | Resign

ಬಾಬುಪ್ರಸಾದ್​ ಮೋಡಿಸ್​

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾರಿ ನಿರ್ದೇಶನಾಲಯ(ಇಡಿ)ಈಗಾಗಲೇ 300 ಕೋಟಿ ರೂ. ಮೌಲ್ಯದ ಸೈಟ್​ಗಳನ್ನು ಜಪ್ತಿ ಮಾಡಿದೆ. ಇದರ ಬೆನ್ನಲ್ಲೆ ಮುಡಾದಲ್ಲಿ ಒಟ್ಟು 600 ಕ್ಕೂ ಅಧಿಕ ಬೇನಾಮಿ ಹೆಸರಲ್ಲಿರುವ ಆಸ್ತಿಯನ್ನು ಇಡಿ ಪತ್ತೆ ಮಾಡಿದೆ ಎಂದು ವರದಿಯಾಗಿದೆ.

ಈ ವಿಚಾರವನ್ನು ಪ್ರಸ್ತಾಪ ಮಾಡಿರುವ 'ಕರ್ನಾಟಕ ಬಿಜೆಪಿ' ತಮ್ಮ ಎಕ್ಸ್​ ಖಾತೆಯಲ್ಲಿ ಸಿಎಂ ರಾಜೀನಾಮೆ(Resign) ಯಾವಾಗ ಎಂದು ಪ್ರಶ್ನೆ ಮಾಡಿದೆ.

ಮುಡಾ ಹಗರಣ ಸಂಬಂಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮತ್ತಷ್ಟು ಅಕ್ರಮಗಳನ್ನು ಬಯಲು ಮಾಡಿದ್ದು, 600 ಕ್ಕೂ ಹೆಚ್ಚು ಸ್ಥಿರಾಸ್ತಿಗಳು ಬೇನಾಮಿ ಹೆಸರಲ್ಲಿರುವುದನ್ನು ಪತ್ತೆ ಮಾಡಿದ್ದಾರೆ. ಮುಡಾ ಸೈಟು ಹಂಚಿಕೆಯಲ್ಲಿ ಅಕ್ರಮವಾಗಿರುವುದು ಸಾಬೀತಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಸಿಎಂ ಸಿದ್ದರಾಮಯ್ಯ ಅವರು ಮುಡಾದಲ್ಲಿ ಅಕ್ರಮವಾಗಿ ಸೈಟು ಪಡೆದುಕೊಂಡು ಪ್ರಕರಣ ದಾಖಲಾಗಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದರೂ ಭಂಡತನದಿಂದ ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡದೆ ರಾಜ್ಯದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ರಾಜೀನಾಮೆ ನೀಡಲು ಇನ್ನೆಷ್ಟು ದಿನ ಕಾಯುತ್ತೀರಿ ಸಿದ್ದರಾಮಯ್ಯ ಅವರೇ? ಎಂದು ವ್ಯಂಗ್ಯವಾಡಿದೆ.

ಕೇಂದ್ರದಿಂದ ಅನುದಾನ ಇಲ್ಲ ಎಂದು ಸುಳ್ಳು ಹೇಳಿದ ಸಿದ್ದು!

ಕೇಂದ್ರದಿಂದ ಅನುದಾನ ಬಂದಿಲ್ಲ ಎಂದು ಸುಳ್ಳಾಡುವ ಸಿಎಂ ಸಿದ್ದರಾಮಯ್ಯ, ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಯೋಗ್ಯತೆ ನಿಮ್ಮ ಸರ್ಕಾರಕ್ಕಿಲ್ಲ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಕೊಟ್ಟ ಅನುದಾನವನ್ನು ಖರ್ಚು ಮಾಡಿ ಸಧ್ಭಳಕೆ ಮಾಡದ ನಿಮ್ಮ ಸರ್ಕಾರ ಯಾವ ಪುರುಷಾರ್ಥಕ್ಕೆ ಅಧಿಕಾರದಲ್ಲಿರಬೇಕು..?. ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆಪಾದನೆ ಮಾಡುವ ನಿಮ್ಮ ಟೂಲ್‌ ಕಿಟ್‌ ಅನ್ನು ಬದಿಗಿಟ್ಟು, ಮೊದಲು ಅನುದಾನವನ್ನು ಸದ್ಭಳಕೆ ಮಾಡುವತ್ತ ಗಮನಹರಿಸಿ ಎಂದು ಬಿಜೆಪಿ ಕಿಡಿಕಾರಿದೆ.