ನ್ಯೂಸ್

Muda Case | ಆತ್ಮಸಾಕ್ಷಿ‌ ಅನ್ನೋದಕ್ಕಿಂತ ನೈತಿಕತೆ ಸಹ ದೊಡ್ಡದು, ಸಿದ್ದರಾಮಯ್ಯಗೆ ಸೋಮಣ್ಣ ಟಾಂಗ್

ಚಿತ್ರದುರ್ಗ: ಒಂದು ತಪ್ಪು ಸರಿಪಡಿಸಲು ಹೋಗಿ ಹತ್ತಾರು ತಪ್ಪುಗಳನ್ನು ಮಾಡಬೇಡಿ ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಹೇಳಿದ್ದೇ ಎಂದು ಕೇಂದ್ರದ ರೈಲ್ವೆ ರಾಜ್ಯಸಚಿವ ವಿ.ಸೋಮಣ್ಣ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಕಾಲ ಮೇಲೆ ಕಲ್ಲು ಹಾಕಿಕೊಂಡು ಗಾಯ ಮಾಡಿಕೊಂಡಿರುವ ಸಿಎಂ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಲಿ. ಕ್ಲಿನ್‌ಚಿಟ್ ಪಡೆದು ಮತ್ತೆ ಸಿಎಂಯಾಗಲಿ ಎಂದು ಸಲಹೆ ನೀಡಿದರು.

ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಆತ್ಮಸಾಕ್ಷಿಗಿಂತ ನೈತಿಕತೆ ದೊಡ್ಡದು, ಹಿಂದೇ ಸದನದಲ್ಲಿ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಪ್ರಕಟಿಸಬಹುದಾಗಿತ್ತು. ಆದರೆ ಈಗ ಈ ಪ್ರಕರಣ ಒಂದು ಹಂತ ತಲುಪಿದೆ. ಮತ್ತೆ ಅವರು ಚರ್ಚೆ ವಸ್ತು ಆಗಬಾರದು. ಎಲ್ಲರಂತಲ್ಲ ಎಂಬ ಮಾತು ಅವರ ಬಗ್ಗೆ ಇದೆ. ಅವರು ಕೂಡ ಎಲ್ಲರಂತೆ ಎಂದಾಗದೆ, ರಾಜೀನಾಮೆ ಕೊಡಲಿ. ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುತ್ತೇನೆ ಎನ್ನುವ ಸಿದ್ದರಾಮಯ್ಯರ ಕೈಯನ್ನು ಯಾರು ಹಿಡಿದುಕೊಂಡಿಲ್ಲ ಎಂದು ಹೇಳಿದರು.

ಭದ್ರಾಮೇಲ್ದಂಡೆ ನೀರಾವರಿ ಯೋಜನೆಗೆ 5300 ಕೋಟಿ ರೂ.ಅನುದಾನ ಕೊಡುವ ಮಾತಿಗೆ ಬದ್ಧವಿದೆ. 2-3 ಕಂತುಗಳಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು. ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂಬ ಒತ್ತಾಯವಿದೆ. ಇದಕ್ಕೆ ಒಂದಿಷ್ಟು ನಿಯಮಗಳಿವೆ, ಯೋಜನೆ ಅನುಷ್ಠಾನವಾದರೆ ಬರಡು ಭೂಮಿ ಚಿತ್ರದುರ್ಗ ಸಹಿತ ನಾನಾ ಜಿಲ್ಲೆಗಳಿಗೆ ಅನುಕೂಲವಾಗುತ್ತದೆ ಎಂದರು.

ಆತ್ಮಸಾಕ್ಷಿಗೆ ಅನುಗುಣವಾಗಿಯೇ ಸಿಎಂ ರಾಜೀನಾಮೆ ನೀಡಲಿ

ಚಿತ್ರದುರ್ಗ: ಬೇನಾಮಿ ಭೂಮಿ ಖರೀದಿಸುವುದು, ತಮ್ಮದಲ್ಲದ ಭೂಮಿಗೆ ಪರಿಹಾರ ಪಡೆಯುವುದು ಆತ್ಮಸಾಕ್ಷಿ ನಡೆಯೇ ಎಂದು ಸಂಸದ ಗೋವಿಂದ ಎಂ.ಕಾರಜೋಳ ಅವರು, ಸಿಎಂ ಸಿದ್ದರಾಮಯ್ಯರನ್ನು ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕೋರ್ಟ್‌ನಲ್ಲಿ ಹಿನ್ನಡೆ ಆದ ದಿನದಂದೇ ಅವರು ರಾಜೀನಾಮೆ ಕೊಡಬೇಕಿತ್ತು. ಈಗಲಾದರೂ ಅವರು ತಮ್ಮ ಆತ್ಮಸಾಕ್ಷಿಗೆ ಅನು ಗುಣವಾಗಿಯೇ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕೆಂದು ಕಾರಜೋಳ ಸಿದ್ದರಾಮಯ್ಯರನ್ನು ಒತ್ತಾಯಿಸಿದರು.