ನ್ಯೂಸ್

ಬಹುನಿರೀಕ್ಷಿತ ಒಳ ಮೀಸಲು ಸಮೀಕ್ಷೆಗೆ ನಾಳೆ ಚಾಲನೆ; ದತ್ತಾಂಶ ಸಂಗ್ರಹಕ್ಕೆ ತಯಾರಿ | ಮೇ 17ರವರೆಗೆ ರಾಜ್ಯಾದ್ಯಂತ ಮನೆ ಮನೆಗಳಿಗೆ ಭೇಟಿ

ಬಹು ನಿರೀಕ್ಷಿತ ಒಳ ಮೀಸಲು ಸಮೀಕ್ಷೆಗೆ ಮೇ 5ರಂದು ಚಾಲನೆ ದೊರೆಯಲಿದ್ದು, ಈ ಪ್ರಕ್ರಿಯೆಗೆ ಸರ್ಕಾರದ ಜತೆಗೆ ಸಮೀಕ್ಷೆದಾರರು, ಪರಿಶಿಷ್ಟ ಸಮುದಾಯಗಳು ಸನ್ನದ್ಧವಾಗಿವೆ. ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲು ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂಬ ಸುಪ್ರಿಂಕೋರ್ಟ್ ತೀರ್ಪಿನ ನಂತರ ಹಲವು ದಶಕಗಳ ಕೂಗಿಗೆ ಪರಿಹಾರ ಸನ್ನಿಹಿತವಾಗಿದೆ. ಒಳ ಮೀಸಲು ನಿಗದಿಗೆ ಮುನ್ನ ಉಪ ವರ್ಗೀಕರಣ ಕೈಗೊಳ್ಳಲು ಅವಶ್ಯ ಇರುವ ದತ್ತಾಂಶ ಸಂಗ್ರಹಿಸಲು ಮೇ 5ರ ಸೋಮವಾರದಿಂದಲೇ ಮನೆ ಮನೆ ಸಮೀಕ್ಷಾ ಕಾರ್ಯ ಆರಂಭವಾಗುತ್ತಿದೆ.

ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿರುವ ಜನರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ, ಔದ್ಯೋಗಿಕ ಪ್ರಾತಿನಿಧ್ಯತೆ ಇತ್ಯಾದಿಗಳ ಸ್ಥಿತಿಗತಿ ಬಗ್ಗೆ ಸಮೀಕ್ಷೆ ನಡೆಯುತ್ತದೆ. ಮೇ 5ರಿಂದ 17ರವರೆಗೆ ಮನೆ ಮನೆ ಭೇಟಿಗೆ ತೆರಳಲಿರುವ ಸಮೀಕ್ಷಾ ತಂಡ ಮೇ 19ರಿಂದ 21ರವರೆಗೆ ವಿಶೇಷ ಶಿಬಿರ ಹಮ್ಮಿಕೊಂಡು ಸಮೀಕ್ಷೆ ಅವಧಿಯಲ್ಲಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದೇ ವೇಳೆ ಪರಿಶಿಷ್ಟ ಜಾತಿಗೆ ಸಂಬಂಧಿಸಿದಂತೆ ಸಮುದಾಯಗಳು ಗ್ರಾಮ ಮಟ್ಟದಲ್ಲಿ ಸಭೆ ನಡೆಸಿದ್ದು, ನಿಖರ ಮಾಹಿತಿ ದಾಖಲೀಕರಿಸಬೇಕೆಂದು ಪಣ ತೊಟ್ಟಿವೆ. ಜಾಗೃತಿ ಸಭೆ ನಡೆಸಿ, ತಿಳಿವಳಿಕೆ ನೀಡಿವೆ.

ವಿಶೇಷತೆಗಳು

ಅಂತರ್​ಜಾತಿ ಪ್ರಕರಣ: ಅಂತರ್​ಜಾತಿ ವಿವಾಹವಾದ ಪ್ರಕರಣಗಳಲ್ಲಿ ಹೆಂಡತಿ ಅಥವಾ ಸೊಸೆಗೆ ಜಾತಿ ಬೇರೆ ಇರಬಹುದು, ಈ ಮಾಹಿತಿಯನ್ನು ತಿಳಿದು ನಮೂದಿಸಬೇಕೆಂದು ಹೇಳಿರುವುದು ವಿಶೇಷ ಸಂಗತಿ. ಅದೇ ರೀತಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲಾಗಿದೆಯೇ ಇಲ್ಲವೇ ಎಂಬ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಮೂಲ ಜಾತಿ ಮಾಹಿತಿ: ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಯ ಅಧಿಕೃತ ಪಟ್ಟಿಯನ್ನು ಸಿದ್ಧಪಡಿಸಿ ಅನುಬಂಧ 2ಎರಲ್ಲಿ ಅಳವಡಿಸಲಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಹೆಸರಿಗೆ ಮಾತ್ರ ಸಮೀಕ್ಷೆ ಸೀಮಿತಗೊಳಿಸಬೇಕು. ಯಾರಾದರೂ ತಮ್ಮ ಜಾತಿಯನ್ನು ಪರಿಶಿಷ್ಟ ಜಾತಿ ಎಂದು ಹೇಳಿದರೆ ಮೂಲ ಜಾತಿ ಕೇಳಲಾಗುತ್ತದೆ.

ನಮೂದು ಕಡ್ಡಾಯ: ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಕ್ರಮ ಸಂಖ್ಯೆ 1 ಆದಿ ಆಂಧ್ರ, ಕ್ರಮ ಸಂಖ್ಯೆ ಆದಿ ದ್ರಾವಿಡ, ಕ್ರಮ ಸಂಖ್ಯೆ 3 ಆದಿ ಕರ್ನಾಟಕ ಎಂದು ನಮೂದಿಸಿರುವ ಜಾತಿಗಳು ಮೂಲ ಜಾತಿಗಳಲ್ಲ. ಇವು ಜಾತಿಗಳ ಗುಂಪು. ಹೀಗಾಗಿ ಜಾತಿ ಮತ್ತು ಮೂಲ ಜಾತಿ ನಮೂದು ಕಡ್ಡಾಯವಾಗಿರಲಿದೆ.

101 ಜಾತಿಗಳ ಪಟ್ಟಿ: 101 ಮೂಲ ಜಾತಿ/ ಉಪ ಜಾತಿಗಳಿದ್ದು, ಅವುಗಳಿಗೆ ಪ್ರತ್ಯೇಕ ಸಂಕೇತ ನೀಡ ಲಾಗಿದೆ. ಜಾತಿಗಳ ಹೆಸರು ಮೊಬೈಲ್ ಅಪ್ಲಿಕೇಷನ್​ನಲ್ಲಿ ಲಭ್ಯವಾಗಲಿದೆ. ಅದರಲ್ಲಿ ಒಂದನ್ನು ಪರಿಗಣಿಸಬೇಕಾಗುತ್ತದೆ. ಡೋಂಟ್ ನೋ ಎಂಬ ಅವಕಾಶ ಇದ್ದು, ಇದರ ಬಗ್ಗೆ ಆಕ್ಷೇಪಣೆಗಳಿದ್ದು, ಈ ಅವಕಾಶ ತೆಗೆದು ಹಾಕುವಂತೆ ಒತ್ತಾಯವಿದೆ. ಈ ಬಗ್ಗೆ ಆಯೋಗ ನಿರ್ಧಾರ ಕೈಗೊಂಡಿಲ್ಲ.

ಸಮೀಕ್ಷೆ ಸುತ್ತ: ಶಿಕ್ಷಣ, ಸಾಮಾಜಿಕ ತಾರಮ್ಯಕ್ಕೆ ಒಳಗಾಗಿರುವುದು, ಶೌಚಗೃಹ ವ್ಯವಸ್ಥೆ, ದೀಪದ ಮೂಲ, ನಿವೇಶನ, ಅಡುಗೆ ಇಂಧನ, ವಾಸವಿರುವ ಮನೆ ಮಾಲಿಕತ್ವ, ನೆಲೆ ನಿಂತ ಸ್ಥಳ, ಸರ್ಕಾರದಿಂದ ಪಡೆದ ಸವಲತ್ತು, ಚರಾಸ್ತಿ, ಜಾನುವಾರು, ಜಮೀನು, ಕುಟುಂಬದ ಸಾಲ, ರಾಜಕೀಯ ಪ್ರಾತಿನಿಧ್ಯ, ವಾರ್ಷಿಕ ಆದಾಯ, ಮೀಸಲಾತಿ ಸೌಲಭ್ಯ, ಹಾಸ್ಟೆಲ್ ಸೌಲಭ್ಯ, ವೃತ್ತಿ/ಕಸುಬು, ವೈವಾಹಿಕ ಸ್ಥಾನಮಾನದ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತದೆ.

ಸಮೀಕ್ಷೆ ಸ್ವರೂಪ

ರಾಜ್ಯದಲ್ಲಿ ಏಕಕಾಲದಲ್ಲಿ ಸಮೀಕ್ಷೆ ನಡೆಯಲಿದ್ದು, ಶಿಕ್ಷಣ ಇಲಾಖೆಯಿಂದಲೇ 57 ಸಾವಿರ ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ.

ಸಮೀಕ್ಷೆದಾರರಿಗೆ ಗುರುತಿನ ಚೀಟಿ ನೀಡ ಲಾಗಿದೆ. ಸಮೀಕ್ಷೆ ವೇಳೆ ಅವಸರ ಮಾಡದಂತೆ ಎಚ್ಚರಿಸಿದ್ದು ತರಬೇತಿಯನ್ನೂ ನೀಡಲಾಗಿದೆ.

ವೈಜ್ಞಾನಿಕ ಸಮೀಕ್ಷೆಗಾಗಿ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ಅದರ ಮೂಲಕವೇ ದಾಖಲೀಕರಣ ಮಾಡಲಾಗುತ್ತದೆ.

ಮತದಾರರ ಪಟ್ಟಿಯಲ್ಲಿರುವ ಮನೆ ಸಂಖ್ಯೆಗಳ ಆಧಾರದ ಮೇಲೆ ಮನೆ ಮನೆ ಭೇಟಿ ನೀಡಿ ಪರಿಶಿಷ್ಟ ಜಾತಿಯ ಕುಟುಂಬ ಗುರುತಿಸುವ ಕೆಲಸ ನಡೆಯುತ್ತದೆ.

ಪರಿಶಿಷ್ಟ ಜಾತಿಯವರ ಮನೆಯ ಪ್ರತಿಯೊಂದು ಸದಸ್ಯನ ಮಾಹಿತಿಯನ್ನು ಮೊಬೈಲ್ ಆಪ್​ನಲ್ಲಿ ಭರ್ತಿ ಮಾಡಲಾಗುತ್ತದೆ.

ಕುಟುಂಬಕ್ಕೆ ಸೇರದ ವ್ಯಕ್ತಿ ಮೂಲಕವಾಗಲಿ ಅಥವಾ ಸಂಘ ಸಂಸ್ಥೆ ಮೂಲಕವಾಗಿ ಮಾಹಿತಿ ಸಂಗ್ರಹಿಸದಂತೆ ಸ್ಪಷ್ಟ ಸೂಚನೆ ನೀಡಲಾಗಿದೆ.

ಸಮೀಕ್ಷೆ ವಿಶೇಷ, ಸ್ವಯಂ ಚಾಲಿತ ವಿವರಣೆ!

ಸಮೀಕ್ಷೆದಾರರು ಮನೆಯ ಮುಖ್ಯಸ್ಥರ ಮತದಾರರ ಪಟ್ಟಿಯಲ್ಲಿನ ಕ್ರಮಸಂಖ್ಯೆಯನ್ನು ನಮೂದಿಸುತ್ತಾರೆ, ಬಳಿಕ ಪರಿಶಿಷ್ಟ ಜಾತಿಯವರಾಗಿದ್ದರೆ ಅವರ ಪಡಿತರ ಕಾರ್ಡ್, ಆಧಾರ್ ಕಾರ್ಡ್ ಸಂಖ್ಯೆ ನಮೂದಿಸುತ್ತಾರೆ. ಪಡಿತರ ಕಾರ್ಡ್ ಸಂಖ್ಯೆ ನಮೂದಿಸುತ್ತಿದ್ದಂತೆ ಪಡಿತರ ಚೀಟಿಯ ಕುಟುಂಬ ಸದಸ್ಯರ ವಿವರ (ಕುಟುಂಬ ಡೇಟಾದಲ್ಲಿ ಇರುವಂತೆ ) ಮೊಬೈಲ್ ಪರದೆಯಲ್ಲಿ ಪ್ರದರ್ಶಿತವಾಗಲಿದೆ. ಈ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಸೇರಿಸಲು ಅವಕಾಶ ಇರಲಿದೆ.

ಒಳ ಮೀಸಲು ಜೂನ್ 10ರೊಳಗೆ ಜಾರಿ ಮಾಡದಿದ್ದರೆ ಹೋರಾಟ

ಬೆಂಗಳೂರು: ರಾಜ್ಯದಲ್ಲಿ ಜೂನ್ 10ರ ಒಳಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಸಂಸದ ಗೋವಿಂದ ಕಾರಜೋಳ, ಮಾಜಿ ಸಂಸದ ನಾರಾಯಣಸ್ವಾಮಿ ಎಚ್ಚರಿಸಿದರು.

ಒಳ ಮೀಸಲು ವಿಚಾರದಲ್ಲಿ ಮುಖ್ಯಮಂತ್ರಿ ಬದ್ಧತೆ ತೋರಿಸಬೇಕು. ಒಳ ಮೀಸಲಾತಿ ಜಾರಿ ಮಾಡುವ ಮೊದಲು ಸರ್ವ ಪಕ್ಷದ ಸಭೆ ನಡೆಸಬೇಕು. ನ್ಯಾ.ನಾಗಮೋಹನ ದಾಸ್ ಅವರ ಜೊತೆ ಸರ್ವ ಪಕ್ಷದ ಸದಸ್ಯರು ಚರ್ಚೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಉಭಯ ನಾಯಕರು ಆಗ್ರಹಿಸಿದರು.

ಒಳ ಮೀಸಲಾತಿ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿ 9 ತಿಂಗಳು ಕಳೆದರೂ ರಾಜ್ಯ ಸರ್ಕಾರ ಒಳ ಮೀಸಲಾತಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಸಿದ್ದರಾಮಯ್ಯ ಒಳಮೀಸಲಾತಿ ಕೊಡದೇ ಕುಂಟು ನೆಪ ಹೇಳುತ್ತಿದ್ದಾರೆ. ಈಗ ನಾಗಮೋಹನ ದಾಸ್ ಅವರಿಂದ ಗಣತಿ ಮಾಡಿಸುವುದಾಗಿ ಹೇಳುತ್ತಿದ್ದಾರೆ. ಸರ್ಕಾರದ ಬಳಿ ಕಾಂತರಾಜು ವರದಿ ಅಂಕಿ-ಅಂಶಗಳು ಇವೆ. ಅದರ ಆಧಾರದಲ್ಲಿ ಒಳ ಮೀಸಲಾತಿ ಕೊಡಬೇಕು ಎಂದು ಒತ್ತಾಯಿಸಿದರು.

ನ್ಯಾ.ನಾಗಮೋಹನ ದಾಸ್ ಆಯೋಗ ಮೇ 5ರಿಂದ ಒಳ ಮೀಸಲಾತಿ ಗಣತಿ ಪ್ರಾರಂಭ ಮಾಡುತ್ತಿದೆ. ಇದಕ್ಕೂ ಮೊದಲೇ ಸಿದ್ದರಾಮಯ್ಯ ಜೂನ್ 10ರ ಒಳಗೆ ಮೀಸಲಾತಿ ಕೊಡುತ್ತೇವೆ ಎಂಬ ಭರವಸೆ ಕೊಟ್ಟು ಗಣತಿ ಶುರು ಮಾಡಿಸಬೇಕು ಎಂದರು.

ಬೆಳಗಾವಿ ಅಧಿವೇಶನ ಸಮಯದಲ್ಲಿ ಸಚಿವ ಮಹದೇವಪ್ಪ ಪ್ರತಿಭಟನಾ ಸ್ಥಳಕ್ಕೆ ಬಂದು 3 ತಿಂಗಳ ಒಳಗೆ ಒಳ ಮೀಸಲಾತಿ ಕೊಡಿಸುತ್ತೇವೆ. ಇಲ್ಲದೇ ಹೋದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದರು. ಈಗ ಮೊದಲು ಒಳ ಮೀಸಲಾತಿ ಕೊಡಿಸಲಿ ಎಂದು ಸವಾಲು ಎಸೆದರು. ಸಮುದಾಯದ 6 ಮಂತ್ರಿಗಳು ಒಳ ಮೀಸಲಾತಿ ಕೊಡಿಸಬೇಕು. ಮೀಸಲಾತಿ ಕೊಡಿಸದೇ ಹೋದರೆ ನೀವು ಈ ಸಮಾಜಕ್ಕೆ ದ್ರೋಹ ಮಾಡಿದ ಹಾಗೆ ಆಗುತ್ತದೆ ಎಂದು ಎಚ್ಚರಿಕೆ ಕೊಟ್ಟರು.

ಮಾದಿಗರೇ ಸೌಲಭ್ಯಕ್ಕಾಗಿ ಎದ್ದೇಳಿ

ಬೆಂಗಳೂರು: ಮೂವತ್ತು ವರ್ಷದ ಹೋರಾಟ ಫಲವಾಗಿ ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ಈಗ ನಮ್ಮ ಮುಂದಿರುವ ಸವಾಲು ಜಾತಿಸಮೀಕ್ಷೆ ಶೇ.100 ಯಶಸ್ವಿಗೊಳಿಸುವುದಾಗಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎಚ್.ಆಂಜನೇಯ ಹೇಳಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿಯಿಂದ ನಗರದ ಲಿಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ‘ಜಾತಿಸಮೀಕ್ಷೆ ವೇಳೆ ಬರೆಯಿಸಿ ನಮ್ಮ ಜಾತಿ ಮಾದಿಗ’ ಎಂಬ ಭಿತ್ತಿಪತ್ರ, ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.

ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿನ ಕೆಲವರು ನಮ್ಮ ಜನಸಂಖ್ಯೆ ಹೆಚ್ಚಿದೆ ಎನ್ನುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದೆ. ಆದರೆ, ನಮ್ಮಲ್ಲಿ ಜಾಗೃತಿಯ ಕೊರತೆ ಕಾರಣಕ್ಕೆ ಹಿಂದುಳಿದಿದ್ದೇವೆ. ಈಗ ಜಾತಿಸಮೀಕ್ಷೆ ಬಳಿಕ ಎಲ್ಲ ಸತ್ಯ ಹೊರಬೀಳಲಿದೆ. ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಆಗಲಿದೆ ಎಂದು ಹೇಳಿದರು. ಆದ್ದರಿಂದ ಮಾದಿಗ ಸಮುದಾಯವರು ಪ್ರತಿ ಊರು, ಪಟ್ಟಣ, ಕಾಲನಿ, ಕೇರಿ, ಓಣಿ, ಬಡಾವಣೆಗಳಲ್ಲಿನ ಮಾದಿಗ ಸಮುದಾಯದ ಪ್ರತಿ ಮನೆಗೆ ಭೇಟಿ ನೀಡಿ ಮೇ 5ರಿಂದ 17ರ ವರೆಗೆ ಮನೆಗಳಲ್ಲಿಯೇ ಇದ್ದು, ಜಾತಿ ಸಮೀಕ್ಷೆದಾರರು ಮನೆಗೆ ಬಂದಾಗ ನಾವು ಕೋಡ್ 61 ಮಾದಿಗ ಎಂದು ಹೇಳಬೇಕು. ಈ ಮೂಲಕ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಮೀಸಲಾತಿ ಪಡೆಯುವ ಪ್ರಯತ್ನ ಮಾಡಬೇಕಿದೆ ಎಂದರು.