ನ್ಯೂಸ್

ವಿರೂಪಾಕ್ಷೇಶ್ವರ ದೇವಾಲಯ ಕಾಯಕಲ್ಪಕ್ಕೆ ಸಿದ್ಧತೆ, ಡಿಸಿ ಸಿ.ಸತ್ಯಭಾಮ ಅಧ್ಯಕ್ಷತೆಯಲ್ಲಿ 2 ದಿನ ಸ್ವಚ್ಛತೆ

ಮುಳಬಾಗಿಲು: ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ದೇವಾಲಯದ ಸ್ವಚ್ಛತೆಯನ್ನು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ರೆಡ್ಡಿ ಸೇರಿ ಎಲ್ಲ ಅಧಿಕಾರಿಗಳ ತಂಡ ಮತ್ತು ಸಿಬ್ಬಂದಿ 2 ದಿನಗಳ ಕಾಲ ಮಾಡಲಿದ್ದಾರೆ ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಹೇಳಿದರು.

ತಾಲೂಕಿನ ವಿರೂಪಾಕ್ಷಿ ಗ್ರಾಮದಲ್ಲಿರುವ ವಿರೂಪಾಕ್ಷೇಶ್ವರ ದೇವಾಲಯದ ಅವ್ಯವಸ್ಥೆ ಕುರಿತು ವಿಜಯವಾಣಿ ನ.23ರಂದು ‘ಅವನತಿಯತ್ತ ಪ್ರಾಚೀನ ದೇಗುಲ’ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾಡಳಿತ ಮತ್ತು ಅಧಿಕಾರಿಗಳು ವಿರೂಪಾಕ್ಷೇಶ್ವರ ದೇವಾಲಯದ ಆವರಣಕ್ಕೆ ಭೇಟಿ ನೀಡಿ ಅಭಿವೃದ್ಧಿಗೆ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ.

ದೇವಾಲಯದ ಸ್ವಚ್ಚತೆಗೆ ಪೂರ್ವಭಾವಿ ಸಭೆ:

ಇತ್ತೀಚಿಗೆ ದೇವಾಲಯಕ್ಕೆ ಗ್ರಾಮೀಣ ಅಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್ ಭೇಟಿ ನೀಡಿ ದೇವಾಲಯ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಸೂಚಿಸಿದ್ದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಅವರು ವಿಶೇಷ ಕಾಳಜಿ ವಹಿಸಿ ದೇವಾಲಯದ ಆವರಣದ 3 ಎಕರೆ 38 ಗುಂಟೆ ಜಮೀನಿನಲ್ಲಿ ಬೆಳೆದಿರುವ ಗಿಡಗಂಟಿಗಳು, ಕಳೆಯನ್ನು ಸ್ವಚ್ಛಗೊಳಿಸಲು ಸೋಮವಾರ ದೇವಾಲಯದಲ್ಲಿ ವಿಶೇಷ ಸಭೆ ಅಯೋಜಿಸಿದ್ದರು. ಶನಿವಾರ ಮತ್ತು ಭಾನುವಾರ ತಾಲೂಕಿನ ಮತ್ತು ಜಿಲ್ಲೆಯ ಎಲ್ಲ ಇಲಾಖೆಯ ಅಧಿಕಾರಿಗಳು ನೌಕರರು ಸಿಬ್ಬಂದಿ ಶ್ರಮದಾನ ಮಾಡುವ ಮೂಲಕ ದೇವಾಲಯದ ಸ್ವಚ್ಛತೆಗೆ ಅದ್ಯತೆ ನೀಡಲು ಸಂಕಲ್ಪ ಮಾಡಿದರು.

9ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗಿ: ಎನ್‌ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸೇರಿ 9ನೇ ತರಗತಿ ಮೇಲ್ಪಟ್ಟ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಸ್ವಪ್ರೇರಣೆಯಿಂದ ಪಾಲ್ಗೊಳ್ಳಬಹುದು. ಶ್ರಮದಾನ ಮಾಡಲು ಇಚ್ಚಿಸುವ ಸ್ಥಳೀಯರು ಸೇರಿ ಸ್ವಯಂ ಸೇವಕರು ಪಾಲ್ಗೊಂಡು ಸೇವೆ ಸಲ್ಲಿಸಬಹುದು ಎಂದು ರವಿಕುಮಾರ್ ತಿಳಿಸಿದರು.

ಜಿಪಂ ಉಪಕಾರ್ಯದರ್ಶಿ ಕೆ.ಪಿ ಸಂಜೀವಪ್ಪ, ತಹಸೀಲ್ದಾರ್ ಕೆ.ಎನ್.ರಾಜಶೇಖರ್, ತಾಪಂ ಇಒ ಶ್ರೀನಿವಾಸ್, ಜವಳಿ ಮತ್ತು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಎಂ.ಸೌಮ್ಯಾ, ಬಿಇಒ ಡಿ.ಗಿರಿಜೇಶ್ವರಿದೇವಿ ಟಿಎಚ್‌ಒ ಡಾ.ಕೆ.ಎಂ.ವರ್ಣಶ್ರೀ, ಆವಣಿ ಆರ್‌ಐ ಸಿ.ಸುಬ್ರಮಣಿ, ಆವಣಿ ಪಿಡಿಒ ಜೆ.ವರದರಾಜ್ ಮತ್ತಿತರರು ಇದ್ದರು.