ಲೀನ್ ಯೋಜನೆ ಹಾಗೂ ರಫ್ತು ಕುರಿತ ವಿಚಾರ ಸಂಕಿರಣವನ್ನು ಆರ್.ಗಣೇಶ್ ಉದ್ಘಾಟಿಸಿದರು. ಜೋಯಿಸ್ ರಾಮಾಚಾರ್, ಬಿ.ಗೋಪಿನಾಥ್, ಎಸ್.ಶ್ರೀಪತಿ, ಟಿ.ಎಸ್.ಮಲ್ಲಿಕಾರ್ಜುನ ಇತರರಿದ್ದರು.  
ನ್ಯೂಸ್

ಆರ್ಥಿಕ ವಲಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಎಂಎಸ್‌ಎಂಇ

ಶಿವಮೊಗ್ಗ: ಹೆಚ್ಚಿನ ಉದ್ಯೋಗಾವಕಾಶ ಮತ್ತು ಆರ್ಥಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಎಂಎಸ್‌ಎಂಇಗಳ (ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ) ಕಾರ್ಯಕ್ಷಮತೆ ಮತ್ತು ವೇಗ ಹೆಚ್ಚಿಸುವ ಉದ್ದೇಶದಿಂದ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆರ್.ಗಣೇಶ್ ಹೇಳಿದರು.

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಲೀನ್ ಯೋಜನೆ, ಜಡ್‌ಇಡಿ ಹಾಗೂ ರಫ್ತು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಕೃಷಿ ನಂತರ ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತಿರುವುದು ಎಂಎಸ್‌ಎಂಇಗಳು. ಸರ್ಕಾರದ ಕಾರ್ಯಕ್ರಮಗಳಿಗೆ ಪೂರಕವಾಗಿ ಕಾಸಿಯಾ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಸರ್ಕಾರ ಪ್ರತಿ 5 ವರ್ಷಕ್ಕೊಮ್ಮೆ ಕೈಗಾರಿಕಾ ನೀತಿ ಪರಿಷ್ಕರಿಸಿ ಕೈಗಾರಿಕೆಗಳಿಗೆ ಹಲವಾರು ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವನ್ನು ಉದ್ಯಮಿಗಳು ಮಾಡಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳ ಉಪಯೋಗ ಪಡೆದು ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ, ಮಾರ್ಪಾಡು ಮಾಡಬಹುದು ಎಂದರು.

ಎಸ್‌ಐಡಿಬಿಐನ ಡಿಜಿಎಂ ಗುಣಶೇಖರನ್ ಮಾತನಾಡಿ, ಇಂತಹ ಕಾರ್ಯಕ್ರಮಗಳು ಯುವ ಮತ್ತು ನವೋದ್ಯಮಿಗಳಿಗೆ ಕೈಗಾರಿಕೆಯಲ್ಲಿನ ವಿವಿಧ ಅವಕಾಶಗಳ ಕುರಿತು ಮಾಹಿತಿ ನೀಡುತ್ತದೆ ಎಂದು ತಿಳಿಸಿದರು.