ಮೃತ್ಯುದೇವತೆ ಪೋಸ್ಟರ್​ 
ನ್ಯೂಸ್

mruthyudevathe movie review: ದುಷ್ಟರ ಮೇಲೆ ‘ಮೃತ್ಯುದೇವತೆ’ಯ ಗದಾಪ್ರಹಾರ

ಪ್ರಮುಖ ಮುಖ್ಯಾಂಶಗಳು

  • ಬಾಯ್​ಫ್ರೆಂಡ್​-ಗರ್ಲಫ್ರೆಂಡ್ ಬದಲಾವಣೆಯಿಂದ ಆಗುವ ಪರಿಣಾಮಗಳ ಬೆಳಕು ಚೆಲ್ಲುವ ಸಿನಿಮಾ
  • ಸಾರಿಕಾ ರಾವ್ ಅಭಿನಯವೇ ಚಿತ್ರದ ಪ್ಲಸ್ ಪಾಯಿಂಟ್
  • ಮೊದಲಿಗೆ ಇರುವ ಕುತೂಹಲ ಕಥೆ ಬೆಳೆದಂತೆ ಸಿಗುವುದಿಲ್ಲ.
ಚಿತ್ರ: ಮೃತ್ಯುದೇವತೆ
ನಿರ್ದೇಶನ: ನವೀನ್ ಮಹಾದೇವ್
ತಾರಾಗಣ: ಸಾರಿಕಾ ರಾವ್, ಮಾಹಿನ್ ಕುಬೇರ್, ವಿನಯಾ ಪ್ರಸಾದ್, ಡಯಾನಾ, ಮಧು ಮತ್ತಿತರರು.
ರೇಟಿಂಗ್: 3
ಬೆಂಗಳೂರು: ಮುಂದುವರಿದ ಮಹಾನಗರಗಳಲ್ಲಿ ಬಾಯ್‌ಫ್ರೆಂಡ್‌ಗಳು - ಗರ್ಲ್‌ಫ್ರೆಂಡ್‌ಗಳು ಪರಸ್ಪರ ವಿನಿಮಯ ಮಾಡಿಕೊಂಡು ಬಳಿಕ ನಡೆದ ಅಪರಾಧಗಳ ಬಗ್ಗೆ ವರದಿಗಳನ್ನು ಕೇಳಿರುತ್ತೇವೆ. ಇಂತಹ ಪಾಶ್ಚಾತ್ಯ ಸಂಸ್ಕೃತಿಯಿಂದ ದೇಸಿ ಸಂಸ್ಕೃತಿ ಮೇಲೆ ಬೀರುವ ಪರಿಣಾಮಗಳ ಕುರಿತು ನವೀನ್ ಮಹಾದೇವ್ ನಿರ್ದೇಶನದ ‘ಮೃತ್ಯುದೇವತೆ’ ಸಿನಿಮಾ ಚರ್ಚಿಸುತ್ತದೆ.
ಡೆಲಿವರಿ ಕೆಲಸ ಮಾಡುವ ಹುಡುಗಿ ಆರತಿ (ಸಾರಿಕಾ). ಗೆಳತಿ ದೀಪಾ(ಡಯಾನಾ) ಒತ್ತಾಯದ ಮೇರೆಗೆ ಆರತಿ, ಗೆಳೆಯರ ಜತೆ ಪಿಕ್ನಿಕ್‌ಗೆ ಹೊರಡುತ್ತಾಳೆ. ಆರತಿ ಗೆಳೆಯ (ಮಧು), ದೀಪಾಳ ಗೆಳೆಯ ಕಿಶೋರ್ (ಮಾಹಿನ್) ಮಹದೇಶ್ವರ ಬೆಟ್ಟದ ತಪ್ಪಲು ಸೇರುತ್ತಾರೆ. ಆದರೆ, ಪಿಕ್ನಿಕ್ ಹಿಂದೆ ಕಿಶೋರ್ ಸಂಚು ಬೇರೆಯದ್ದೇ ಆಗಿರುತ್ತದೆ. ಆರತಿಯನ್ನು ವಶಪಡಿಸಿಕೊಳ್ಳುವ ದುರುದ್ದೇಶ ಆತನದು. ಆ ಸಂಚಿಗೆ ದೀಪಾ ಅಡ್ಡಿಯಾಗುತ್ತಾಳೆ. ಹಾಗಾದರೆ, ಆರತಿ ಮುಂದಿನ ಗತಿಯೇನು? ಕಿಶೋರ್ ಸಂಚಿಗೆ ಆರತಿ ಬಲಿಯಾಗುತ್ತಾಳಾ? ದೀಪಾ ಕಥೆಯೇನು? ಎಂಬುದು ‘ಮೃತ್ಯುದೇವತೆ’ ಚಿತ್ರದ ಮುಂದುವರಿದ ಕಥೆ. ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯಿಂದಾಗಿ ಇಂದಿನ ಸಮಾಜ ಯಾವೆಲ್ಲ ರೀತಿ ಹಾಳಾಗುತ್ತಿದೆ ಎಂಬ ವಿಷಯದ ಮೇಲೆ ಈ ಸಿನಿಮಾ ಬೆಳಕು ಚೆಲ್ಲಿದೆ. ಕೆಲವು ಸನ್ನಿವೇಶ, ದೃಶ್ಯಗಳು ದೀರ್ಘ ಅನಿಸುತ್ತವೆ. ಹೀಗಾಗಿ ಕೆಲವೆಡೆ ಕತ್ತರಿ ಪ್ರಯೋಗವಾಗಿದ್ದರೆ, ಸಿನಿಮಾ ಮತ್ತಷ್ಟು ಆಪ್ತವಾಗುತ್ತಿತ್ತು. ಮೊದಲಿಗೆ ಇರುವ ಕುತೂಹಲ ಕಥೆ ಬೆಳೆದಂತೆ ಸಿಗುವುದಿಲ್ಲ. ಪ್ರಮುಖ ಆರೋಪಿಗಳು ಕೊಲೆಯಾದ ಬಳಿಕವೂ ಕಥೆ ಮುಂದುವರಿಸಿ, ಡ್ಯುಯೆಟ್ ಸಾಂಗ್ ಇಟ್ಟಿರುವುದು ಪ್ರೇಕ್ಷಕರಲ್ಲಿ ಗೊಂದಲ ಮೂಡಿಸಬಹುದು. ನಟಿ ಸಾರಿಕಾ ರಾವ್ ತಯಾರಿ ನಡೆಸಿಯೇ ಅಭಿನಯಿಸಿದ್ದಾರೆ. ದುಗುಡ, ಕೋಪ ಹಾಗೂ ಆಕ್ರೋಶವನ್ನು ಮುಖಭಾವದಲ್ಲಿ ತೋರಿಸಿದ್ದಾರೆ. ಕಾಳಿ ನೃತ್ಯದಲ್ಲಿ ಗಮನ ಸೆಳೆಯುತ್ತಾರೆ. ಮಾಹಿನ್ ಕುಬೇರ್ ಹೊರತುಪಡಿಸಿ ಉಳಿದ ಹೊಸ ಕಲಾವಿದರ ಅಭಿನಯ ಅಷ್ಟಕಷ್ಟೇ. ಅನಿರುದ್ಧ ಜೈಕುಮಾರ್ ಕಾಡಿನ ದೃಶ್ಯಗಳನ್ನು ಚೆನ್ನಾಗಿ ಸೆರೆಹಿಡಿದಿದ್ದಾರೆ.