ನ್ಯೂಸ್

ಶ್ರೀ ಲಕ್ಕಪ್ಪಸ್ವಾಮೀಜಿ ಇತರರಿಗೆ ಮಾದರಿ

ಹುಣಸೂರು: ವೈಭೋಗದ ಜೀವನಕ್ಕೆ ಮಾರುಹೋಗದೆ ಸರಳ ಜೀವನ ನಡೆಸುತ್ತಾ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿರುವ ಸಾಧನಾಪುರದ ಶ್ರೀ ಲಕ್ಕಪ್ಪಸ್ವಾಮೀಜಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.

ತಾಲೂಕಿನ ರತ್ನಪುರಿ ಬಳಿಯ ಸಾಧನಾಪುರ ವಿಶ್ವಶಾಂತಿ ಸಂಸ್ಥೆಯಲ್ಲಿ ಗುರುವಾರ ಸಂಸ್ಥಾಪಕ ಶ್ರೀ ಲಕ್ಕಪ್ಪಸ್ವಾಮೀಜಿ ಅವರ ನಿವೇದನೆ ಪುಸ್ತಕ ಬಿಡುಗಡೆ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರೀ ಮಠದ ಕುಟೀರದಲ್ಲಿ ಶ್ರೀಗಳು ನೆಲದ ಮೇಲೆ ಮಲಗುವರು. ಯಾವುದೇ ವೇದಿಕೆಯನ್ನು ಹಂಚಿಕೊಳ್ಳದ ಇವರ ನಿಸ್ವಾರ್ಥ ಸೇವೆ, ಉಚಿತ ಶಿಕ್ಷಣ ಸೌಲಭ್ಯದಿಂದಾಗಿ ಅನೇಕ ಬಡವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆದಿದ್ದಾರೆ ಎಂದರು.

ನಿವೇದನೆ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, 1965ರಲ್ಲಿ ಆರಂಭಗೊಂಡಿರುವ ಈ ಸಂಸ್ಥೆಗೆ ಸ್ವಾಮೀಜಿ ಅವರ ನಿಸ್ವಾರ್ಥ ಶಿಕ್ಷಣ ಸೇವೆಯನ್ನು ಪರಿಗಣಿಸಿ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಅವರು ಸಂಸ್ಥೆಗೆ 45 ಎಕರೆ ಭೂಮಿ ಮಂಜೂರು ಮಾಡಿ ದಲಿತ, ಹಿಂದುಳಿದ ಮಕ್ಕಳಿಗೆ ನೆರವಾಗಿದ್ದಾರೆ. ಅದೇ ರೀತಿ ಮಾಜಿ ಸಚಿವರಾದ ದಿ.ಬಿ.ರಾಚಯ್ಯ. ದಿ.ಬಸವಲಿಂಗಪ್ಪ, ದಿ.ಮಲ್ಲಿಕಾರ್ಜುನಸ್ವಾಮಿ ಅವರು ಸಹ ಸಂಸ್ಥೆಯ ಪ್ರಗತಿಗೆ ಕಾರಣರಾಗಿದ್ದರು. ನಾನು ಕೂಡ ಈ ಸಂಸ್ಥೆ ಬಗ್ಗೆ ಅಪಾರ ಅಭಿಮಾನ ಹೊಂದಿದ್ದು, ಸಂಸ್ಥೆಯ ಪ್ರಗತಿಗೆ ಕೈಜೋಡಿಸುವೆ ಎಂದರು.

ಮಾಜಿ ಸಚಿವ ಎಚ್.ವಿಶ್ವನಾಥ್ ಸಾಧಕರನ್ನು ಸನ್ಮಾನಿಸಿ ಮಾತನಾಡಿ, ಧೀಕ್ಷೆ ಪಡೆದವರು ಸರ್ವ ತ್ಯಾಗಕ್ಕೂ ಸಿದ್ಧ ಎನ್ನುವುದಕ್ಕೆ ಲಕ್ಕಪ್ಪಸ್ವಾಮೀಜಿಯವರೇ ಸಾಕ್ಷಿಯಾಗಿದ್ದು, ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.

ನಿವೇದನೆ ಪುಸ್ತಕ ಕುರಿತು ಬಿಇಒ ನಾಗರಾಜ್ ಮಾತನಾಡಿ, ಪುಸ್ತಕ ಬರೆದ ಯೋಗಿ ಲಕ್ಕಪ್ಪಸ್ವಾಮೀಜಿ ಅವರು ತಮ್ಮ ಹೆಸರನ್ನು ಸಹ ನಮೂದಿಸಿಕೊಳ್ಳದೆ ಕೇವಲ ಬರೆದವರು ಎಂದಿರುವುದು ಭಗವದ್ಗೀತೆಯ ಕರ್ತೃವಿನ ನಂತರ ಇಂತಹದ್ದೊಂದು ಅಂಶ ಪ್ರಪಂಚಕ್ಕೆ ನಿವೇದನೆಯಾಗಿದೆ ಎಂದರು.

ತಾಪಂ ಅಧ್ಯಕ್ಷೆ ಪದ್ಮಮ್ಮ ಬಸವರಾಜು, ಸಂಸ್ಥೆಯ ಅಧ್ಯಕ್ಷ ಡಾ.ಮೂರ್ತಿ, ಉಪಾಧ್ಯಕ್ಷ ಮೋಹನ್, ಹರಿಹರ ಆನಂದಸ್ವಾಮಿ, ತಾ.ಪಂ. ಸದಸ್ಯ ಪ್ರಭಾಕರ್, ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಡಾ.ನಾಗೇಶ್, ಕಾರ್ಯದರ್ಶಿ ಮಹಾಲಿಂಗಪ್ಪ, ಉಪನ್ಯಾಸಕ ಶಿವಕುಮಾರ್ ಮಾತನಾಡಿದರು. ಮುಖ್ಯಶಿಕ್ಷಕ ಶಿವಣ್ಣ ಸಂಸ್ಥೆಯ ಪ್ರಗತಿ ವಾಚಿಸಿದರು.
ಗ್ರಾಪಂ ಉಪಾಧ್ಯಕ್ಷೆ ತುಳಸಮ್ಮ, ಮಾಜಿ ಅಧ್ಯಕ್ಷ ಸತ್ಯನಾರಾಯಣರಾವ್ ಖರಾಡೆ, ಸದಸ್ಯ ಡೇವಿಡ್, ಮುಖಂಡರಾದ ಅಜ್ಗರ್‌ಪಾಷಾ, ರತ್ನಪುರಿ ಪುಟ್ಟಸ್ವಾಮಿ ಇದ್ದರು. ಶಾಲಾ- ಕಾಲೇಜು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.