ರಾಯಚೂರು: ನರೇಂದ್ರ ಮೋದಿ ಸರ್ಕಾರ ಸತತ 2ನೇ ಬಾರಿ ಅಧಿಕಾರಕ್ಕೆ ಬಂದ ಬಳಿಕ ನಡೆದ ಸಂಸತ್ನ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸಂಸದರ ಹಾಜರಾತಿ ವಿಚಾರ ಚರ್ಚೆಯ ಮುನ್ನಲೆಗೆ ಬಂದಿದೆ. ರಾಜ್ಯದ 28
ಸಂಸದರ ಒಟ್ಟಾರೆ ಹಾಜರಾತಿ ಸರಾಸರಿ ಶೇ.77 ಆಗಿದೆ. ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ಪ್ರಲ್ಹಾದ್ ಜೋಷಿ, ಸುರೇಶ ಅಂಗಡಿ ಹಾಗೂ ರಾಯಚೂರು ಸಂಸದರಾದ ರಾಜಾ ಅಮರೇಶ್ವರ ನಾಯಕ ಅವರು ಒಟ್ಟು 57 ದಿನಗಳ ಕಲಾಪದಲ್ಲಿ ಸಕ್ರಿಯವಾಗಿ ಭಾಗಿಯಾಗಿ ಶೇ.100 ಹಾಜರಾತಿ ದಾಖಲೆ ಬರೆದಿದ್ದಾರೆ.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಜರಾತಿಯಲ್ಲಿ ಕೊನೆಯ ಸ್ಥಾನದಲ್ಲಿದ್ದು, 22 ದಿನ ಮಾತ್ರ ಸದನಕ್ಕೆ ಹಾಜರಾಗಿದ್ದಾರೆ. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ಹಾಜರಾತಿ 35 ದಿನಕ್ಕೆ ಸೀಮಿತವಾಗಿದೆ.
ರಾಜಾ ಅಮರೇಶ್ವರ ನಾಯಕ ಒಟ್ಟು 105 ಪ್ರಶ್ನೆಗಳನ್ನು ಕೇಳಿದರೆ ಕೊಪ್ಪಳ ಸಂಸದ ಸಂಗಣ್ಣ ಕರಡಿ, ಪ್ರಜ್ವಲ್ ರೇವಣ್ಣ, ಅನಂತಕುಮಾರ ಹೆಗಡೆ, ರಮೇಶ ಜಿಗಜಿಣಗಿ, ಶ್ರೀನಿವಾಸ ಪ್ರಸಾದ್ ಒಂದೇ ಒಂದು ಪ್ರಶ್ನೆಗಳನ್ನೂ ಕೇಳಿಲ್ಲ.
ಆದೇಶಕ್ಕೆ ಕಿಮ್ಮತ್ತಿಲ್ಲ
ಬಿಜೆಪಿ ಸಂಸದರು, ಕೇಂದ್ರ ಸಚಿವರು ಸಂಸತ್ ಕಲಾಪಕ್ಕೆ ಕಡ್ಡಾಯವಾಗಿ ಹಾಜರಾಗಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಎಚ್ಚರಿಸಿದ್ದಾರೆ. ಇದರ ಹೊರತಾಗಿಯೂ ಸಂಸದರ ಗೈರು ಮುಂದುವರಿದಿರುವುದು ಬಿಜೆಪಿಗೆ ಮುಜುಗರ ತಂದಿದೆ.