ಬೆಂಗಳೂರು: ಹಾವೇರಿ ಪ್ರಕರಣದಲ್ಲಿ ಎ್ಐಆರ್ ದಾಖಲಾದ ಕಾರಣಕ್ಕೆ ಸಂಸದ ತೇಜಸ್ವಿ ಸೂರ್ಯ ಅಳುವುದೇಕೆ? ಸುಳ್ಳು ಸುದ್ದಿ ಹಬ್ಬಿಸುತ್ತಿರುವ ನಿಮಗೆ ಮೆರವಣಿಗೆ ಮೂಲಕ ಸನ್ಮಾನ ಮಾಡಬೇಕಾ? ಸುಳ್ಳು ಹೇಳಿದ ಮೇಲೆ ಅದಕ್ಕೆ ಪ್ರಾಯಶ್ಚಿತವಾಗಬೇಕಲ್ಲವೇ? ನಾನು ಜಾಲತಾಣದ ಪೋಸ್ಟ್ ಮಾಡಿದ್ದೇನೆ ಎಂದು ಈಗ ಅಳುತ್ತಾ ಕೂತರೆ ಏನು ಪ್ರಯೋಜನ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಯ ರೈತನ ಆಸ್ತಿಯಲ್ಲಿ ವಕ್ಫ್ ಉಲ್ಲೇಖವಾಗಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತೇಜಸ್ವಿ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಹಾಕುತ್ತಾರೆ. ಸರ್ಕಾರ ಸ್ಪಷ್ಟನೆ ನೀಡಿದ ಬಳಿಕ ಅದನ್ನು ಡಿಲೀಟ್ ಮಾಡುತ್ತಾರೆ. ನಂತರ ತೇಜಸ್ವಿಸೂರ್ಯ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದು ಇದರಿಂದ ಸಮಾಜದಲ್ಲಿ ಘರ್ಷಣೆಗೆ ಪ್ರೇರಣೆಯಾಗಲಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಪೊಲೀಸರು ತೇಜಸ್ವಿ ಸೂರ್ಯನ ಮೇಲೆ ಎಫ್‌ಐಆರ್ ದಾಖಲಿಸುತ್ತಾರೆ ಎಂದು ವಿವರಿಸಿದರು.
ಇದಕ್ಕೆ ಹೆದರಿಕೊಂಡ ಆ ಪುಟ್ಟ ನನ್ನ ವಿರುದ್ಧ ಮಾತನಾಡಿದ್ದಾರೆ. ಪ್ರಿಯಾಂಕ್ ಖರ್ಗೆಗೆ ಕೆಲಸ ಇಲ್ಲ, ಎಫ್‌ಐಆರ್ ಹಾಕಿಸುವುದೇ ಕೆಲಸ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಾನೆ. ನಾನು ಇದುವರೆಗೂ ಅವರ ಮೇಲೆ, ಅವರ ಶಾಸಕರು, ಸಂಸದರು ಹಾಗೂ ಅವರ ಬಾಡಿಗೆ ಭಾಷಣಕಾರರ ಮೇಲೆ ಎಷ್ಟು ಎ್ಐಆರ್ ಹಾಕಿಸಿದ್ದೇನೆ ಎಂದು ನೋಡಲಿ ಎಂದು ಸವಾಲು ಹಾಕಿದರು.
ನೀವೊಬ್ಬ ಸಂಸದ, ಬೇರೆ ಸಮಯದಲ್ಲಿ ಹಿಂದೂಗಳ ಸಂರಕ್ಷ ಎಂದು ಹೇಳುವವರು ಈಗ ಯಾಕೆ ಅಳುತ್ತಿದ್ದೀರಿ? ಎಂದು ಪ್ರಶ್ನಿಸಿದ ಅವರು, ತೇಜಸ್ವಿ ಸೂರ್ಯ ಅವರೇ, ಈ ಬಾರಿ ನಿಮಗೆ ಎಮರ್ಜೆನ್ಸಿ ಎಕ್ಸಿಟ್ ಇಲ್ಲ. ಓಡಿ ಹೋಗಲು ಅವಕಾಶವಿಲ್ಲ. ಜನರಿಗೆ ನೀವು ಉತ್ತರಿಸಲೇಬೇಕು ಎಂದು ಸವಾಲು ಹಾಕಿದರು.
ಮೋದಿಯಷ್ಟು ದೊಡ್ಡ ಸುಳ್ಳುಗಾರ ಮೊತ್ತೊಬ್ಬರಿಲ್ಲ. ಅವರ ಸುಳ್ಳು ಪ್ರತಿಪಾದನೆಗೆ ಸುಳ್ಳಿನ ಕಾರ್ಖಾನೆ ಆರಂಭಿಸಲಾಗಿದೆ. ಚುನಾವಣೆ ಬಂದಾಗ ಹೊಸ ಹೊಸ ಪದ ಪ್ರಯೋಗವಾಗುತ್ತದೆ. ಲವ್ ಜಿಹಾದ್, ನಗರ ನಕ್ಸಲರು ಎಂಬ ಪದ ಬಿಟ್ಟು ಈಗ ಲ್ಯಾಂಡ್ ಜಿಹಾದ್ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.
ಸುಳ್ಳಿನ ಕಾರ್ಖಾನೆ ಮಾಲೀಕರು ಮೋದಿಯವರೇ ಆಗಿದ್ದಾರೆ. ಇದನ್ನೇ ಒಂದು ಕೈಗಾರಿಕೋದ್ಯಮವನ್ನಾಗಿ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಹಾಗೂ ಹಲವು ಬಾಡಿಗೆ ಭಾಷಣಕಾರರು ದುಡಿಯುತ್ತಿದ್ದಾರೆ. ಮೋದಿ ಹಾಗೂ ಹಾಗೂ ಇವರ ಬಾಡಿಗೆ ಭಾಷಣಕಾರರು ರಕ್ತಹೀರುವ ಕ್ರಿಮಿಗಳು ಎಂದು ಟೀಕಾಪ್ರಹಾರ ನಡೆಸಿದರು.
ತೇಜಸ್ವಿ ಸೂರ್ಯ ಮಹಿಳಾ ಪೀಡಕ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೊಬ್ಬರು ಆರೋಪ ಮಾಡುತ್ತಾರೆ. ಇದರ ಬಗ್ಗೆ ಸುದ್ದಿಯಾಗದಂತೆ 49 ಮಾಧ್ಯಮಗಳ ಮೇಲೆ ನ್ಯಾಯಾಲಯದಲ್ಲಿ ನಿರ್ಬಂಧ ಆದೇಶ ತಂದಿದ್ದರು. ಮೀಟೂ ಸೂರ್ಯ ಅವರು ಈ ಕಾರಣಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ನೆನಪಿಸುತ್ತೇನೆ ಎಂದರು.
ವಿಮಾನ ಹಾರಾಟದಲ್ಲಿರುವಾಗ ತುರ್ತು ನಿರ್ಗಮನ ಬಾಗಿಲು ತೆರೆಯಲು ಮುಂದಾಗಿದ್ದ ಸೂರ್ಯ ಅವರು ನಂತರ ಕ್ಷಮೆ ಕೇಳಿದ್ದರು. ಅರಬ್ ಮಹಿಳೆ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ಅರಬ್ ಸರ್ಕಾರ ಕೂಡ ಎಚ್ಚರಿಕೆ ನೀಡಿತ್ತು. ಇವರು ರಾಷ್ಟ್ರಕ್ಕೆ ಅಪಮಾನ ಮಾಡಿದ ವ್ಯಕ್ತಿ. ಕೋವಿಡ್ ಸಮಯದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದು ಹೀರೋ ಆಗಲು ಹೋಗಿ ಬಿಜೆಪಿ ನಾಯಕರನ್ನೇ ಸಿಲುಕಿಸಿದ್ದು ತೇಜಸ್ವಿ ಸೂರ್ಯ ಎಂದು ಹಾಸ್ಯಮಾಡಿದರು.