ಕೊಡಗು: ಕಾಂಗ್ರೆಸ್ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ್ದ ಐದು ಗ್ಯಾರೆಂಟಿ ಯೋಜನೆ ವಿಚಾರ ಸದ್ಯ ರಾಜ್ಯ ರಾಜಕಾರಣದಲ್ಲಿ ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳಿಗೆ ಅವಕಾಶ ಮಾಡಿಕೊಟ್ಟಂತಾಗಿದೆ. ಬಿಜೆಪಿ ಹಲವು ನಾಯಕರು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಹೇಳುತ್ತಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾ, ಪ್ರಧಾನಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದಾರಾ ಎಂದು ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ದ.ಕ, ಉಡುಪಿ, ಶಿವಮೊಗ್ಗ ಜಿಲ್ಲೆಯ ಖಾಸಗಿ ಬಸ್ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಬೇಕು: ಸುನಿಲ್ ಕುಮಾರ್
ಕೊಡಗಿನಲ್ಲಿ ನಡೆದ ಜಿಲ್ಲಾಭಿವೃದ್ಧಿ ಸಮನ್ವಯ ಸಮಿತಿ ಸಭೆ ಬಳಿಕ ಸಂಸದ ಪ್ರತಾಪ್ ಸಿಂಹ ಮಾತನಾಡುತ್ತಾ, ಸಿಎಂ ಸಿದ್ದರಾಮಯ್ಯ ವಿರುದ್ಧ ತಿರುಗೇಟು ನೀಡಿದ್ದಾರೆ. ನರೇಂದ್ರ ಮೋದಿ ಅವರನ್ನು ನೀವು ಪರಮಾರ್ಶಿಸಲು ಹೋಗಬೇಡಿ. ಪ್ರಧಾನಿ ಬಗ್ಗೆ ಮಾತನಾಡುವಷ್ಟು ನೀವು ದೊಡ್ಡ ಮನುಷ್ಯರಲ್ಲ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ಅವರನ್ನು ನರಹಂತಕ ಎಂದ ಮೇಲೂ ಜನರು ನಿಮಗೆ ಎಷ್ಟು ಸೀಟು ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. 2014ರಲ್ಲಿ ನಮಗೆ 17, 2019ರಲ್ಲಿ 25 ಸೀಟು ಕೊಟ್ಟಿದ್ದಾರೆ. 2024ರಲ್ಲಿ ಜನರು ಮತ್ತೆ ಎಷ್ಟು ಸೀಟು ಕೊಡಬೇಕು ಎಂಬುದನ್ನು ನಿರ್ಧಾರ ಮಾಡುತ್ತಾರೆ. ಪ್ರಧಾನಿಯವರು ಕೊಟ್ಟ ಮಾತು ಈಡೇರಿಸಿದ್ದಾರೋ ಇಲ್ಲವೋ ಎಂಬ ಪ್ರಶ್ನೆಗೆ ಜನರೇ ಉತ್ತರ ನೀಡುತ್ತಾರೆ. ಚುನಾವಣೆಯಲ್ಲಿ ಗೆದ್ದರೆ ಏನು ಕೊಡುತ್ತೇವೆ ಎಂದಿದ್ದೀರೋ, ಅದರ ಬಗ್ಗೆ ಅಷ್ಟೇ ಮಾತನಾಡಿ ಎಂದು ಹೇಳಿದರು.
ದೇಶದಲ್ಲಿ 30 ಕೋಟಿಗೂ ಹೆಚ್ಚು ಮತಗಳನ್ನು ಪಡೆದು ಬಂದಿರುವ ಮೋದಿಯವರ ಬಗ್ಗೆ ನಿಮಗೆ ಮಾತು ಬೇಡ. ನೀವು ಕೊಟ್ಟಿರುವ ಭರವಸೆಗಳನ್ನು ನೋಡಿಯೇ ಜನ ನಿಮಗೆ ಮತ ಹಾಕಿದ್ದಾರೆ. ಯಾರೂ ನಿಮ್ಮ ಮುಖ ನೋಡಿ ವೋಟ್ ಹಾಕಿಲ್ಲ ಎಂದು ವ್ಯಂಗ್ಯವಾಡಿದರು.