ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ತಂಡ ತನಿಖೆ ಮಾಡಲು ಅರ್ಹರಾಗಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ತನಿಖೆಗೆ ನೀಡುವ ಅಗತ್ಯವೇ ಇಲ್ಲವೆಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಈ ಪ್ರಕರಣವನ್ನು ಎಸ್‌ಐಟಿ(SIT) ಗಂಭೀರವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ದೇಶ ಬಿಟ್ಟು ಹೋಗಿದ್ದಾರೆ. ಅವರನ್ನು ಕರೆತರಲು ಈಗಾಗಲೇ ಎಸ್‌ಐಟಿ ತಂಡ ಸಿಬಿಐ ನೆರವು ಕೋರಿದ್ದು, ಬ್ಲೂ ಕಾರ್ನರ್ ನೋಟಿಸ್ ಹೊರಡಿಸಿದೆ. ಪ್ರಜ್ವಲ್ ವಾಪಸ್ ಬರೋವರೆಗೂ ತ್ವರಿತಗತಿ ವಿಚಾರಣೆ ಕಷ್ಟ ಎಂದಿದ್ದಾರೆ.
ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಿಲ್ಲ: ವಿಡಿಯೋ ಪ್ರಕರಣದ ತನಿಖೆ ಎಸ್‌ಐಟಿಯಿಂದ ಸೂಕ್ತವಾಗಿ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರು ಆರೋಪ ಮಾಡುತ್ತಿದ್ದಾರೆ. ಆದರೆ, ನಮ್ಮ ಪೊಲೀಸರು ಸಮರ್ಥರಿದ್ದಾರೆ. ರಾಜಕೀಯ ಹೇಳಿಕೆ ಹೊರತುಪಡಿಸದರೆ ತನಿಖೆ ಸರಿಯಾದ ದಾರಿಯಲ್ಲಿ ನಡೆಯುತ್ತಿದೆ. ಹೀಗಾಗಿ, ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವ ಅಗತ್ಯವಿಲ್ಲ. ಜೊತೆಗೆ, ಈ ಹಿಂದಿನ ಬಿಜೆಪಿ ಸರ್ಕಾರ ಒಂದೇ ಒಂದು ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಿಲ್ಲ. ನಾವು ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯಲ್ಲಿ ಎಸ್‌ಐಟಿ ತಂಡಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದರು.
ಡ್ರೈವರ್ ಕಾರ್ತಿಕ್ ಗೌಡ ಇಲ್ಲಿಯೇ ಇದ್ದಾರೆ. ಅವರು ಹೇಳಿಕೆ ಕೊಟ್ಟಿದ್ದಾರೆ. ಅವರ ಬಂಧನದ ಬಗ್ಗೆ ಎಸ್‌ಐಟಿ ತೀರ್ಮಾನ ಮಾಡುತ್ತೆ. ಇನ್ನು ಪ್ರಜ್ವಲ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಜರ್ಮನಿಗೆ ಹೋಗಿರೋದಷ್ಟೇ ಗೊತ್ತು. ದುಬೈಗೆ ಹೋಗಿದ್ದಾರೆ ಅದೆಲ್ಲ ಗೊತ್ತಿಲ್ಲ, ಇನ್ನೂ ನಿಖರವಾಗಿ ಎಲ್ಲಿದ್ದಾರೆ ಗೊತ್ತಿಲ್ಲ ಎಂದು ತಿಳಿಸಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ಕೊಡೋ ಬಗ್ಗೆ ಎಸ್‌ಐಟಿ ತೀರ್ಮಾನ ಮಾಡುತ್ತದೆ. ಅವರ ಮೇಲೆ ನಮಗೆ ವಿಶ್ವಾಸ ಇದೆ. ವರದಿ ಕೊಡಲಿ ನೊಡೋಣ.
ಗೃಹ ಸಚಿವರಿಗೆ ಮಾಹಿತಿ ಇರಬೇಕಲ್ವಾ.?: ಸಿಎಂ ಎಸ್‌ಐಟಿ ಸಭೆ, ‘ನಾನು ಡಿಸ್ ಕ್ಲೋಸ್ ಮಾಡಲ್ಲ. ಆದ್ರೆ, ಸಿಎಂ ಹಾಗೂ ಗೃಹ ಸಚಿವರಿಗೆ ಮಾಹಿತಿ ಇರಬೇಕಲ್ವಾ.?, ಹಾಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೀತೀವಿ. ಇದೇ ವೇಳೆ ಡಿಸಿಎಂ ಡಿಕೆಶಿ ದೇವರಾಜೇಗೌಡ ಜೊತೆ ಮಾತಾಡಿರೋ ಆಡಿಯೋ ರಿಲೀಸ್ ಕುರಿತು, ‘ಎಸ್‌ಐಟಿ ಅದನ್ನೂ ಗಮನಿಸುತ್ತೆ. ಡಿಕೆಶಿ ಡಿಸಿಎಂ ಇದ್ದಾರೆ. ಅವರು ಜವಾಬ್ದಾರಿ ಸ್ಥಾನದಲ್ಲಿ ಇದ್ದಾರೆ. ಅವರಿಗೆ ಶಿಕ್ಷೆ ಆಗಬಾರದು ಎಂದು ಏನಿಲ್ಲ ಅಂತೇನಿಲ್ಲವಲ್ಲ ಎಂದರು.
ದೇವರಾಜೇಗೌಡ ಅವರು ಎಸ್‌ಐಟಿ ಅಧಿಕಾರಿಗಳೇ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪ ಮಾಡಿರುವುದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆ ರೀತಿ ಹೇಳಿದರೆ, ಈ ಬಗ್ಗೆ ಗಮನಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.