ಬೆಂಗಳೂರು: ಅವ್ಯವಹಾರ, ಅಧಿಕಾರ ದುರ್ಬಳಕೆ ಆರೋಪ ಹಿಂಪಡೆಯಬೇಕು ಇಲ್ಲವೇ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೋಮವಾರ ಧರಣಿ ನಡೆಸಿದರು.
ವಿಧಾನಸೌಧ ಆವರಣದಲ್ಲಿನ ಡಾ.ಬಿ.ಆರ್.ಆಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಮಹಾತ್ಮಗಾಂಧಿ ಪ್ರತಿಮೆ ಮುಂದೆ ಸಾಂಕೇತಿಕ ಧರಣಿ ಹೂಡಿ, ನನ್ನ ಮೇಲಿನ ಆರೋಪ ಹಿಂಪಡೆಯಿರಿ ಇಲ್ಲವೇ ಸಿಬಿಐ ತನಿಖೆಗೆ ಕೊಡಿ ಎಂಬ ಘೋಷಣೆಯುಳ್ಳ ಫಲಕ ಪ್ರದರ್ಶಿಸಿದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಶಾಸಕ ಎಸ್.ಸುರೇಶ್ ಕುಮಾರ್, ವಿಧಾನ ಪರಿಷತ್ ಸದಸ್ಯರಾದ ಭಾರತಿಶೆಟ್ಟಿ, ಎನ್.ರವಿಕುಮಾರ್, ಪ್ರತಾಪಸಿಂಹ ನಾಯಕ, ಶಾಂತರಾಮ ಬುಡ್ನಸಿದ್ದಿ ಮತ್ತಿತರ ಜತೆಗೂಡಿ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಎದುರಿಸಿ, ವೈಯಕ್ತಿಕ ಆರೋಪ ಕೈಬಿಡಿ ಎಂದು ಒತ್ತಾಯಿಸುವ ಫಲಕ ಪ್ರದರ್ಶಿಸಿದರು.
ಸಾಂಕೇತಿಕ ಧರಣಿ ನಂತರ ಸುದ್ದಿಗಾರರಿಗೆ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, ಸಂಸತ್ ಅಧಿವೇಶನ ನಡೆಯುತ್ತಿದೆ. ವರಿಷ್ಠರ ಅನುಮತಿ ಪಡೆದು ಬಂದು ಸಾಂಕೇತಿಕ ಧರಣಿ ನಡೆಸಿರುವೆ. ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದ ಅರೆ ಖಾಸಗಿ ಪತ್ರದಲ್ಲಿ ಆರೋಪ ವಾಪಸ್ ಇಲ್ಲವೇ ಸಿಬಿಐ ತನಿಖೆಗೆ ಶಿಫಾರಸು ಮಾಡಲು ಕೋರಿ ಒಂದು ವಾರದ ಗಡುವು ವಿಧಿಸಿದ್ದೆ.
ಗಡುವು ಮುಗಿದರೂ ಮುಖ್ಯಮಂತ್ರಿಯಿಂದ ಯಾವುದೇ ಉತ್ತರ ಬಾರದ ಕಾರಣ ಪತ್ರದಲ್ಲಿ ತಿಳಿಸಿದಂತೆ ಧರಣಿ ನಡೆಸಿ, ಮತ್ತೊಮ್ಮೆ ಪತ್ರ ಬರೆಯುತ್ತಿರುವೆ. ನನ್ನ ಮೇಲಿನ ಆರೋಪಗಳಿಗೆ ಪ್ರತ್ಯುತ್ಯರ ಅಥವಾ ಸಮರ್ಥನೆ ನೀಡಲು ಸದನದಲ್ಲಿ ಅವಕಾಶವಿಲ್ಲದ ಕಾರಣ ಸಾರ್ವಜನಿಕರಿಗೆ ನನ್ನ ಬಗ್ಗೆ ತಪ್ಪು ಮಾಹಿತಿ ಹೋಗುವುದನ್ನು ತಡೆಯಲು ಸಾಂಕೇತಿಕ ಧರಣಿ ಅನಿವಾರ್ಯವಾಯಿತು ಎಂದು ಸಮಜಾಯಿಷಿ ನೀಡಿದರು.
ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ನಿವೇಶನಗಳ ಹಂಚಿಕೆ ಅಕ್ರಮ ಆರೋಪಗಳಿಗೆ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಉತ್ತರಿಸುವ ವೇಳೆ ಬೊಮ್ಮಾಯಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಭೋವಿ ಅಭಿವೃದ್ಧಿ ನಿಗಮ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಹಗರಣಗಳಾಗಿವೆ ಎಂದು ಆರೋಪಿಸಿದ್ದರು. ಸದನದ ಹೊರಗೂ ಇದೇ ಮಾತು ಪುನರುಚ್ಚರಿಸಿದ್ದು ವೈಯಕ್ತಿಕವಾಗಿ ನೋವುಂಟು ಮಾಡಿದೆ.
ಸಮಾಜ ಕಲ್ಯಾಣ ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ಈ ಹಗರಣಗಳ ಬಗ್ಗೆ ಗೊತ್ತಾಗಿ, ಸಿಎಂ ಬೊಮ್ಮಾಯಿ ಗಮನಕ್ಕೆ ತಂದು ಸಿಐಡಿ ತನಿಖೆಗೆ ಆದೇಶಿಸಿರುವೆ. ಗಂಗಾ ಕಲ್ಯಾಣ ಯೋಜನೆಯಡಿ ಪಾರದರ್ಶಕತೆ ತರಲು ನಗದು ನೇರ ವರ್ಗಾವಣೆ ಜಾರಿಗೊಳಿಸಿದ್ದು, ನಿಮ್ಮ ಸರ್ಕಾರವೂ ಮುಂದುವರಿಸಿದೆ.
ಸದನದಲ್ಲಿ ನಿಮ್ಮ ಆರೋಪ, ಡಿಸಿಎಂ ಡಿ.ಕೆ.ಶಿವಕುಮಾರ್ ಕಟಕಿ ಮಾತುಗಳು ಬೇಸರ ತಂದಿವೆ. ರಾಜಕೀಯ ದ್ವೇಷಕ್ಕೆ ಹುರುಳಿಲ್ಲದ ಆಪಾದನೆ ಮಾಡಿ, ನಾನು ಬರೆದ ಪತ್ರಕ್ಕೂ ಸ್ಪಂದಿಸಿಲ್ಲ. ಆರೋಪ ಹಿಂಪಡೆಯಿರಿ ಅಥವಾ ಸಿಬಿಐ ತನಿಖೆಗೆ ಒಪ್ಪಿಸಿ ಎಂಬ ಕೋರಿಕೆ ಪುನರುಚ್ಚರಿಸಿ ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಮತ್ತೊಮ್ಮೆ ಕಳುಹಿಸುತ್ತಿರುವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.