ಭೋಪಾಲ: ಮಧ್ಯಪ್ರದೇಶದ ಭೋಪಾಲದಲ್ಲಿ 1984ರಲ್ಲಿ ಸಂಭವಿಸಿದ್ದ ಅನಿಲ ದುರಂತದ ಸಂತ್ರಸ್ತರ ಪೈಕಿ ಕೋವಿಡ್ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ ಎಷ್ಟು? ನಿನ್ನೆ ಒಂದೇ ದಿನ ಭಿನ್ನ ಅಂಕಿ ಸಂಖ್ಯೆಗಳು ಪ್ರಕಟವಾಗಿರುವ ಕಾರಣ ಇಂಥದ್ದೊಂದು ಪ್ರಶ್ನೆ ಹುಟ್ಟಿಕೊಂಡಿದೆ.
ಮಧ್ಯಪ್ರದೇಶ ಸರ್ಕಾರ ನಿನ್ನೆ ಪ್ರಕಟಿಸಿರುವ ಡೇಟಾ ಪ್ರಕಾರ, ಕೋವಿಡ್ಗೆ ಬಲಿಯಾದ ಭೋಪಾಲ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 102. ಆದರೆ ಕೆಲವು ಎನ್ಜಿಒಗಳು ಬಹಿರಂಗಪಡಿಸಿರುವ ವರದಿಗಳ ಪ್ರಕಾರ ಕೋವಿಡ್ಗೆ ಬಲಿಯಾದ ಅನಿಲ ದುರಂತ ಸಂತ್ರಸ್ತರ ಸಂಖ್ಯೆ 254. ಅನಿಲ ದುರಂತ ಸಂಭವಿಸಿ ನಿನ್ನೆಗೆ 36 ವರ್ಷ. ಹೀಗಾಗಿ ಈ ಕುರಿತ ಅಂಕಿ ಅಂಶಗಳು ನಿನ್ನೆ ಪ್ರಕಟವಾಗಿವೆ.
ಭೋಪಾಲ ಅನಿಲ ದುರಂತ ಪರಿಹಾರ ಮತ್ತು ಪುನರ್ವಸತಿ ನಿರ್ದೇಶಕ ಬಸಂತ್ ಕುರ್ರೆ ಹೇಳುವ ಪ್ರಕಾರ, ಭೋಪಾಲ ಜಿಲ್ಲೆಯಲ್ಲಿ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ ಡಿಸೆಂಬರ್ 2ರ ಪ್ರಕಾರ 518. ಇದರಲ್ಲಿ 102 ಅನಿಲ ದುರಂತ ಸಂತ್ರಸ್ತರು. ಈ 102 ಜನರ ಪೈಕಿ 69 ಜನ 50 ವರ್ಷ ವಯಸ್ಸಿನ ಮೇಲ್ಪಟ್ಟವರು. ಇನ್ನುಳಿದ 33 ಜನ 50 ವರ್ಷ ವಯಸ್ಸಿನೊಳಗಿನವರು.
ಇದೇ ವೇಳೆ ಭೋಪಾಲ ಗ್ರೂಪ್ ಫಾರ್ ಇನ್ಫಾರ್ಮೇಶನ್ ಆ್ಯಂಡ್ ಆ್ಯಕ್ಷನ್ ಎಂಬ ಎನ್ಜಿಒ ಪ್ರತಿನಿಧಿ ರಚನಾ ಧಿಂಗ್ರಾ ಹೇಳುವ ಪ್ರಕಾರ, ಸರ್ಕಾರ ಹೇಳಿದ 518 ಮೃತರ ಪೈಕಿ 450 ಮೃತರ ಮನೆಗಳಿಗೆ ನಾವು ಭೇಟಿ ನೀಡಿದ್ದೇವೆ. ಭೋಪಾಲ ಅನಿಲ ದುರಂತ ಸಂತ್ರಸ್ತರೋ ಅಲ್ಲವೋ ಎಂಬುದನ್ನು ಖಾತರಿಪಡಿಸುವುದಕ್ಕಾಗಿ. ಈ ಪೈಕಿ 254 ಮೃತರು ಅನಿಲ ದುರಂತದ ಸಂತ್ರಸ್ತರೆಂಬುದು ಖಾತರಿಯಾಗಿದೆ. (ಏಜೆನ್ಸೀಸ್)