ಬೆಂಗಳೂರು:
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಯಾರ‌್ಯಾರು ಸ್ಪರ್ಧೆ ಮಾಡುತ್ತಾರೆ ಎನ್ನುವುದು ಒಂದೆಡೆ ಚರ್ಚೆಯಾದರೆ, ದೇವೇಗೌಡರ ಕುಟುಂಬದಿಂದ ಸ್ಪರ್ಧೆಗಿಳಿಯುವವರು ಯಾರು ಎನ್ನುವುದು ಕೂಡ ಕುತೂಹಲದ ಸಂಗತಿಯಾಗಿದೆ.
ಎಚ್.ಡಿ.ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ನಿಲ್ಲಲಿ, ಬಿಡಲಿ. ನಾವಂತೂ ಹಾಸನದಲ್ಲಿ ಸ್ಪರ್ಧೆ ಮಾಡುವುದು ಖಚಿತ. ಈ ಸ್ಥಾನವನ್ನು ಬೇರೆ ಯಾರಿಗೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಕಡ್ಡಿಮುರಿದಂತೆ ರೇವಣ್ಣ ಕುಟುಂಬ ಮಾಹಿತಿ ರವಾನಿಸಿರುವುದು ದಳಪತಿಗಳಿಗೆ ಮುಜುಗರ ತಂದಿದೆ.
ತೆರೆ ಮರೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಆದರೆ, ಅವರ ಸ್ಪರ್ಧೆಗೆ ಕಾರ್ಯಕರ್ತರು ಮತ್ತು ಮುಖಂಡರ ಮಟ್ಟದಲ್ಲಿ ಅಸಮಾಧಾನವೂ ವ್ಯಕ್ತವಾಗಿರುವುದು ದಳಪತಿಗಳಿಗೆ ಹೊಸ ತಲೆನೋವು ತಂದಿದೆ. ಚುನಾವಣೆ ಸರ್ವೆಯಲ್ಲಿಯೂ ಪ್ರಜ್ವಲ್‌ಗೆ ಪೂರಕ ವಾತಾವರಣ ಕಂಡು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಸ್ಪರ್ಧೆ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಅಪಥ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪ್ರಜ್ವಲ್ ಬದಲಿಗೆ ಯಾರು? ಎನ್ನುವುದು ಇನ್ನೂ ಕುಟುಂಬದೊಳಗೆ ಚರ್ಚೆ ನಡೆಯುತ್ತಲೇ ಇದ್ದರೂ, ಅದು ತಾರ್ಕಿಕ ಅಂತ್ಯ ಕಂಡಿಲ್ಲ.
ದೇವೇಗೌಡರನ್ನು ಹಾಸನದಿಂದ ಸ್ಪರ್ಧೆಗಿಳಿಸಬೇಕು ಎನ್ನುವುದು ಕಾರ್ಯಕರ್ತರ ಒತ್ತಡವಿದೆ. ಆದರೆ ಅದಕ್ಕೆ ಗೌಡರು ಸಮ್ಮತಿ ನೀಡಿಲ್ಲ. ಕೊನೆ ಕ್ಷಣದಲ್ಲಿ ಭವಾನಿ ರೇವಣ್ಣ ಅವರನ್ನು ಸ್ಪರ್ಧೆಗೆ ಇಳಿಸಿದರೆ ಹೇಗೆ? ಎನ್ನುವ ಬಗ್ಗೆ ಚರ್ಚೆ ನಡೆದರೂ ಅದಕ್ಕೂ ಪೂರ್ಣ ಸಹಮತ ವ್ಯಕ್ತವಾಗಿಲ್ಲ.
ಮಂಡ್ಯ ಜಿಲ್ಲೆಯ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಪ್ರಯತ್ನಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಹಮತ ವ್ಯಕ್ತವಾಗಿಲ್ಲ. ಸರ್ವ ಸಮ್ಮತ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರನ್ನೆ ಕಣಕ್ಕೆ ಇಳಿಸಬೇಕು ಎನ್ನುವುದು ದಳಪತಿಗಳ ಆಲೋಚನೆಯಾಗಿದೆ. ಆದರೆ, ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ.
ಮಂಡ್ಯ ಮತ್ತು ಹಾಸನದಲ್ಲಿ ದೇವೇಗೌಡರ ಕುಟುಂಬದವರು ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ. ಪಕ್ಷದಲ್ಲಿ ಒಕ್ಕಲಿಗರ ಅಸ್ಮಿತೆ ಉಳಿಸಿಕೊಳ್ಳಲು ಈ ಎರಡೂ ಕ್ಷೇತ್ರಗಳು ಮಹತ್ವವಾಗಿರುವ ಕಾರಣ, ಕುಮಾರಸ್ವಾಮಿ ಸ್ಪರ್ಧೆಗೆ ಗೌಡರು ಒಲವು ತೋರಿಸಿದ್ದಾರೆ ಎಂದು ಮೂಲಗಳೂ ಖಚಿತಪಡಿಸಿವೆ.